ವರದಿಗಾರ (ಜ 12 ) : ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ರವರು ಬಿಜೆಪಿಯ ಶವ ರಾಜಕೀಯದ ವಿರುದ್ಧ ಕಿಡಿ ಕಾರಿದ್ದು, ತನ್ನ ವೀಡೀಯೋ ಸಂದೇಶವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಎಷ್ಟು ದಿನ ಎಂದು ಈ ಶವ ರಾಜಕೀಯವನ್ನು ಮಾಡುತ್ತೀರಾ? ಮಾತ್ರವಲ್ಲ ಜವಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಸ್ಥಾನಮಾನಗಳಿಗನುಸಾರವಾಗಿ ವರ್ತಿಸಬೇಕು. ಅದನ್ನು ಮರೆತರೆ, ಜನ ಜವಬ್ದಾರಿಯುತವಾಗಿ ಯೋಚಿಸಲು ಶುರು ಮಾಡಿದರೆ ನೀವೆಲ್ಲಾ ನಿರ್ನಾಮವಾಗಿ ಹೋಗ್ತೀರ ಎಂಬುವುದನ್ನು ನೆನಪಿಟ್ಟುಕೊಳ್ಳಿ ಎಂದು ಹಿತೋಪದೇಶ ನೀಡಿದ್ದಾರೆ.
ಕೆಲ ರಕ್ತಪಿಪಾಸುಗಳು ಅಮಾಯಕ ದೀಪಕ್ ರಾವ್ ರನ್ನು ಕೊಂದು ಹಾಕಿದಾಗ ಭಯಂಕರ ರಾಜಕೀಯ ಮಾಡುವ ಬಿಜೆಪಿಗರು, ಅದಕ್ಕೆ ಪ್ರತೀಕಾರವೆಂಬಂತೆ ಘಟನೆಗೆ ಸಂಬಂಧಪಡದ ಮತ್ತೋರ್ವ ಅಮಾಯಕ ಬಶೀರ್ ರವರನ್ನು ಕೊಲ್ಲುತ್ತಾರೆ. ಆದರೆ ಆಗ ನೀವುಗಳು ಮಾತ್ರ ಸುಮ್ಮನಿರುತ್ತೀರ. ಇದರ ಕುರಿತು ಏನೂ ಮಾತನಾಡಲ್ಲ. ಬಶೀರ್ ಕುಟುಂಬದವರು ಸೌಹಾರ್ದ ಸಂದೇಶದ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿ ಹಾಕುತ್ತಾರೆ. ಸೌಹಾರ್ದ ಕಾಪಾಡುವಂತೆ ಸಾರ್ವಜನಿಕರಿಗೆ ಕರೆ ಕೊಡುತ್ತಾರೆ. ಆದರೆ ಬಿಜೆಪಿಗರಿಗೆ ಸಾಮರಸ್ಯದ ಅವಶ್ಯಕತೆ ಇದೆಯೆಂದು ಅನಿಸುವುದೇ ಇಲ್ಲ ಯಾಕೆ ಎಂದು ಮಹೇಂದ್ರರವರು ಪ್ರಶ್ನಿಸಿದ್ದಾರೆ.
ಶವ ರಾಜಕೀಯದ ಮುಂಚೂಣಿಯಲ್ಲಿರುವ ಶೋಭಾ ಕರಂದ್ಲಾಜೆಯವರದೇ ಸಂಸತ್ ಕ್ಷೇತ್ರ ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿನಿ ಧನ್ಯಾಗೆ ದುಷ್ಕರ್ಮಿಗಳು ಮಾನಸಿಕ ಹಿಂಸೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಾಗ ಹಾಗೂ ಬಿಜಾಪುರದ ದಾನಮ್ಮಳನ್ನು ಭೀಕರವಾಗಿ ಅತ್ಯಾಚಾರ ಮಾಡಿ ಕೊಲೆ ನಡೆಸಿದಾಗ ನೀವು ಸುಮ್ಮನಿದ್ದಿದ್ದು ಯಾಕೆ? ಪ್ರಜಾಪ್ರಭುತ್ವವನ್ನು ನೀವು ಕೊಲ್ಲುತ್ತಿದ್ದೀರಿ ಮಾತ್ರವಲ್ಲ ಅದರ ಕೊಲೆಗಡುಕರಿಗೆ ನೀವು ಬೆಂಬಲ ಕೊಡುತ್ತಿದ್ದೀರಿ. ಈ ಸಾವಿನ ಶಾಪಗಳು ಖಂಡಿತಾ ನಿಮ್ಮನ್ನು ಕಾಡುತ್ತದೆ ಎಂದು ಖಾರವಾಗಿ ಹೇಳಿದ್ದಾರೆ.
‘ಎಲ್ಲರಿಗೂ ಸೌಹಾರ್ದ ಸಮಾಜ ಬೇಕಾಗಿದೆ. ಪ್ರತಿ ಸಾವಿಗೂ ಧರ್ಮದ ಲೇಪ ಹಚ್ಚಬೇಡಿ ಹಾಗೂ ರಾಜಕೀಯ ಮಾಡಬೇಡಿ ಎಂದು ಕಳಕಳಿಯಿಂದ ವಿನಂತಿಸುತ್ತೇನೆ. ಎಲ್ಲಾ ಸಾವನ್ನೂ ಒಂದೇ ತಕ್ಕಡಿಯಲ್ಲಿಟ್ಟುಕೊಂಡು ತೂಗಿ. ಎಲ್ಲಾ ಸಾವುಗಳಿಗೂ ನ್ಯಾಯ ದೊರಕಿಸಲು ಮಾನವೀಯತೆಯಿಂದ ಕೆಲಸ ಮಾಡಿ. ಇಲ್ಲದಿದ್ದರೆ ಈ ಸಾವಿನ ರಾಜಕೀಯ ಭವಿಷ್ಯದಲ್ಲಿ ನಿಮ್ಮನ್ನೇ ಬಲಿ ತೆಗೆದುಕೊಳ್ಳಬಹುದು. ಆದುದರಿಂದ ದಯವಿಟ್ಟು ಜವಬ್ದಾರಿಯುತವಾಗಿ ವರ್ತಿಸಿ, ಈ ಶವ ರಾಜಕೀಯವನ್ನು ಬಿಟ್ಟುಬಿಡಿ’ ಎಂದು ತಮ್ಮ ವೀಡೀಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
