ವರದಿಗಾರ (ಜ 11) : ಜನವರಿ 8 ರಂದು ಮಂಗಳೂರಿನ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದ ಸಂದರ್ಭದಲ್ಲಿ ತಕ್ಷಣ ಮಧ್ಯಪ್ರವೇಶ ಮಾಡಿದ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಘಟನೆಯ ಪರಿಸ್ಥಿತಿಯನ್ನು ತಿಳಿ ಗೊಳಿಸಿ ಶಾಂತ ವಾತಾವರಣವನ್ನು ನಿರ್ಮಿಸಿದ್ದರು.
ನಂತರ ಸಂಜೆ 7 ಗಂಟೆಯ ಸಮಯದಲ್ಲಿ ಕಾರಾಗೃಹಕ್ಕೆ ಆಗಮಿಸಿದ ಎಸಿಪಿ ವಲೈಂಟೈನ್ ಡಿಸೋಜಾ ಹಾಗೂ ಸಿಸಿಬಿ ಇನ್ಸ್ಪೆಕ್ಟರ್ ಶಾಂತರಾಮ್ ರವರು ಇವತ್ತು ಕೋರ್ಟಿಗೆ ಹಾಜರಾಗಿ ಜೈಲಿಗೆ ಬಂದವರಾರು ಎಂದು ಕೇಳಿ ಮೂರು ಮಂದಿ ಇರ್ಷಾದ್ ಬಜ್ಪೆ,ನವಾಝ್ ಮಂಗಳೂರು,ಮುಸ್ತಫಾ ಪೊರ್ಕೊಡಿ ಎಂಬ ಕೈದಿಗಳನ್ನು ಪ್ರತ್ಯೇಕವಾಗಿ ಕರೆದು ಅವರ ಮೇಲೆ ವಿನಾಕಾರಣ ಹಲ್ಲೆ ಮಾಡಿ ಧರ್ಮ ನಿಂದನೆಯನ್ನು ನಡೆಸಿ ಕಾರಾಗೃಹದ ಒಳಗೆ ಧರ್ಮ ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ಮಾಡಿ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಇದೀಗಾಗಲೇ ನವಾಝ್ ರವರ ಸಹೋದರ ಶರ್ಫುದ್ದೀನ್ ಎನ್ನುವವರು ಪೊಲೀಸ್ ಕಮಿಷನರ್ ಗೆ ಲಿಖಿತ ದೂರು ನೀಡಿದ್ದಾರೆ.
ಕಾನೂನು ಪಾಲಕರಾಗಿರುವ ಪೊಲೀಸರ ಈ ರೀತಿಯ ವರ್ತನೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.ಅದಲ್ಲದೆ ಕುಟುಂಬದವರು ಕೂಡ ಪೊಲೀಸರ ಕ್ರೌರ್ಯದ ಬಗ್ಗೆ ಪೊಲೀಸ್ ಕಮಿಷನರ್, ಗೃಹ ಮಂತ್ರಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ, ದೂರು ನೀಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ
