ವರದಿಗಾರ (ಜ.10): ಕರ್ನಾಟಕಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ ಬಂದು ಹೋದ ಬಳಿಕ ಕೋಮುಗಲಭೆಗಳು ಹೆಚ್ಚಾಗಿವೆ ಎಂದು ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಹೇಳಿದ್ದಾರೆ.
ಅವರು ರಾಯಚೂರಿನಲ್ಲಿ ಹಡಪದ ಸಮಾಜದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮೌನವಾಗಿದ್ದ ಕೆಲವು ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
‘ನಾವೂ ಹಿಂದೂಗಳೇ ಆದರೆ ಮತ್ತೊಂದು ಸಮಾಜವನ್ನು ದ್ವೇಷಿಸುವ ಹಿಂದೂಗಳಲ್ಲ. ಒಕ್ಕೂಟದಲ್ಲಿ ರಾಷ್ಟ್ರೀಯ ನಾಯಕರು ರಾಜ್ಯಗಳಿಗೆ ಭೇಟಿ ನೀಡುವುದು ಸಹಜ. ಆದರೆ, ಅಮಿತಾ ಷಾ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬರುತ್ತಿದ್ದಾರೆ. ಇವರ ತಂತ್ರಗಾರಿಕೆ ರಾಜ್ಯದಲ್ಲಿ ನಡೆಯುವುದಿಲ್ಲ’ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
‘ಸಂಸದರಾದ ಅನಂತಕುಮಾರ್, ಪ್ರತಾಪ್ ಸಿಂಹ ಹಾಗೂ ಶೋಭಾ ಕರಂದ್ಲಾಜೆ ಈಗ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಯಾರೇ ಸತ್ತರು, ಅವರನ್ನು ಬಿಜೆಪಿಯವರು ಎಂದು ಬಿಂಬಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದು ಬೆನ್ನು ತಟ್ಟಿಕೊಂಡಿದ್ದಾರೆ.
