ವರದಿಗಾರ (ಜ.9):ಕೇಂದ್ರ ಸರಕಾರ ದೇಶದ ಜನರನ್ನು ಜಾತಿ, ಧರ್ಮದ ಆಧಾರದಲ್ಲಿ ಒಡೆಯುತ್ತಿದೆ ಹಾಗೂ ಉದ್ಯೋಗ ಸೃಷ್ಟಿಸುವ ಬದಲು ದೇಶದಲ್ಲಿ ದ್ವೇಷ ಬಿತ್ತುವ ಶಕ್ತಿಗಳು ಅಧಿಕಗೊಂಡಿರುವುದರಿಂದ ಭಾರತ ಸ್ವತಂತ್ರವಾಗಿದ್ದರೂ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ಬಹರೈನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಇಲ್ಲಿನ ಗ್ಲೋಬಲ್ ಆರ್ಗನೈಝೇಶನ್ ಆಫ್ ಪೀಪಲ್ ಆಫ್ ಇಂಡಿಯನ್ ಒರಿಜಿನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಾ, ಮುಂದಿನ ಆರು ತಿಂಗಳುಗಳೊಳಗಾಗಿ ಪಕ್ಷದ ಸಂಘಟನೆಯಲ್ಲಿ ಮಹತ್ವದ ಬದಲಾವಣೆಗಳಾಗಲಿದೆ ಎಂಬ ಸೂಚನೆಯನ್ನು ನೀಡಿದ್ದಾರೆ.
2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಲು ಸಶಕ್ತವಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತನ್ನ ಪಕ್ಷಕ್ಕೆ ಈ ಸಾಮರ್ಥ್ಯ ಮತ್ತು ಶಕ್ತಿ ಇದೆ ಎಂದರು. ಕೇಸರಿ ಪಕ್ಷ ತನ್ನ ಭದ್ರಕೋಟೆಯಾಗಿದ್ದ ಗುಜರಾತ್ ರಾಜ್ಯದಲ್ಲಿ ಈ ಬಾರಿ ಕಷ್ಟ ಪಟ್ಟು ಜಯ ಸಾಧಿಸಿದೆ ಎಂದು ಮೋದಿಯನ್ನು ಕುಟುಕಿದ್ದಾರೆ. ಉದ್ಯೋಗಾವಕಾಶಗಳ ಸೃಷ್ಟಿ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳು ಹಾಗೂ ಶಿಕ್ಷಣ ವ್ಯವಸ್ಥೆ ತಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ನಮ್ಮ ದೇಶ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಅದನ್ನು ನೀವು ಪರಿಹರಿಸಬಲ್ಲಿರಿ. ಭಾರತ ಸ್ವತಂತ್ರವಾಗಿದ್ದರೂ ಅಪಾಯದಲ್ಲಿದೆ. ಈಗ ಭಾರತದಲ್ಲಿ ಬದಲಾವಣೆ ತರಲು ನಾನು ನಿಮ್ಮ ಸಹಕಾರ ಕೋರುತ್ತಿದ್ದೇನೆ ಎಂದು ಹೇಳಿದ್ದಾರೆ.
