1500 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಕೊಡಿಸುತ್ತೇವೆಂದು ಹೇಳಿ ಕರೆದುಕೊಂಡು ಹೋಗಿದ್ದಳು ಬಿಜೆಪಿ ಕಾರ್ಯಕರ್ತೆ!!
ವರದಿಗಾರ (8-1-2018): ಗುಜರಾತಿನ ಸೂರತ್ ನಲ್ಲಿ ತ್ರಿವಳಿ ತಲಾಕ್ ಬಿಲ್ ಲೋಕಸಭೆಯಲ್ಲಿ ಮಂಡನೆಯಾದಾಗ ಸಂಭ್ರಮಿಸಿದ ಮುಸ್ಲಿಮ್ ಮಹಿಳೆಯರ ಚಿತ್ರಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಆದರೆ, ಇದೀಗ ಬಿಜೆಪಿಗೆ ಮುಜುಗರವನ್ನುಂಟು ಮಾಡುವಂತಹ ರೀತಿಯಲ್ಲಿ ಈ ಚಿತ್ರಗಳ ಹಿನ್ನಲೆ ಕತೆಯು ಹೊರಬಂದಿದೆ.
ಅಂದು ಸಂಭ್ರಮಿಸಿದ ಮಹಿಳೆಯರು ಇಂದು ಬಿಜೆಪಿ ವಿರುದ್ಧ ವಂಚನೆಯ ಆರೋಪವನ್ನೆಸಗಿದ್ದಾರೆ. ಇವರ ಪ್ರಕಾರ, ಬಿಜೆಪಿ ಕಾರ್ಯಕರ್ತೆ ಹಮೀದಾ ಮಿರ್ಜಾ ಎನ್ನುವ ಮಹಿಳೆ, ಪ್ರದೇಶದ ಮುಸ್ಲಿಮ್ ಮಹಿಳೆಯರನ್ನು ರೂ.1500 ಹಾಗೂ ಗ್ಯಾಸ್ ಸಿಲಿಂಡರ್ ಕೊಡಿಸುತ್ತೇನೆಂದು ಹೇಳಿ, ತನ್ನ ಜೊತೆ ಮೆಹುರ್ ಲಕ್ಷ್ಮಿ ಮಂದಿರಕ್ಕೆ ಕರೆದುಕೊಂಡು ಹೋಗಿದ್ದಳು.
ಅಲ್ಲಿ ತಲುಪಿದಾಗ ಎಲ್ಲರಿಗೂ ಸಿಹಿತಿಂಡಿ ಹಂಚಿದರು ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಪತ್ರಕರ್ತರು ಫೊಟೋಗಳನ್ನೂ ಕ್ಲಿಕ್ಕಿಸಿದರು. ಆದರೆ, ಮರುದಿನ ಪತ್ರಿಕೆಗಳಲ್ಲಿ ‘ ತ್ರಿವಳಿ ತಲಾಕ್ ಬಿಲ್ ಬೆಂಬಲಿಸಿ ಸಂಭ್ರಮಿಸಿದ ಮುಸ್ಲಿಂ ಮಹಿಳೆಯರು’ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಫೋಟೋಗಳನ್ನು ಕಂಡಾಗ ಮಹಿಳೆಯರು ಬೆಚ್ಚಿ ಬಿದ್ದರು ಹಾಗೂ ಅವರಿಗೆ ತಮ್ಮ ಜೊತೆ ನಡೆದ ಮೋಸದ ಅರಿವಾಯಿತು.
ಮುಸ್ಲಿಮ್ ಮಹಿಳೆಯರು ಬಿಜೆಪಿಯ ಹಮೀದಾ ಮಿರ್ಜಾ, ವಿನೋದ್ ಜೈನ್ ಹಾಗೂ ಜಿಗೀಶ್ ದವೆ ವಿರುದ್ಧ ಷಡ್ಯಂತ್ರದ ಆರೋಪ ಹೊರಿಸಿದ್ದಾರೆ.
“ಮುಸ್ಲಿಮ್ ಮಹಿಳೆಯರನ್ನು ಸರಕಾರಿ ಯೋಜನೆಯ ಭರವಸೆ ನೀಡಿ ಕರೆದುಕೊಂಡು ಹೋಗಿ ನಂತರ ಸಿಹಿತಿಂಡಿ ಹಂಚಿದ್ದಾರೆ. ಅದು ಒಂದು ಉತ್ತಮ ಕಾರ್ಯವಾದುದರಿಂದ ಯಾರೂ ಸಿಹಿತಿಂಡಿ ವಿತರಣೆಯನ್ನು ವಿರೋಧಿಸಿಲ್ಲ. ಆದರೆ, ಅವರ ಫೋಟೋಗಳನ್ನು ತ್ರಿವಳಿ ತಲಾಕ್ ಬಿಲ್ ಬೆಂಬಲಿಸಿ ಆಚರಿಸಿದ ಮಹಿಳೆಯರೆಂದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದು ವಂಚನೆಯಾಗಿದೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡುವ ಬಗ್ಗೆ ಯೋಚಿಸಲಾಗುತ್ತಿದೆ” ಎಂದು ಮುಸ್ಲಿಮ್ ಮಹಿಳಾ ಸುರಕ್ಷಾ ಸಂಘಟನೆಯ ರುಬೀನಾ ಮುಲ್ತಾನಿ ಹೇಳಿದ್ದ್ದಾರೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಬಿಜೆಪಿ ನಾಯಕರು, ಪರಿವಾರದವರ ಒತ್ತಡದಿಂದ ಭಯಪಟ್ಟ ಮಹಿಳೆಯರು ಈ ರೀತಿ ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅವರಿಂದ ಉತ್ತರಿಸಲಾಗದ ಪ್ರಶ್ನೆ: ತಲಾಕ್ ವಿರುದ್ಧ ಹೋರಾಡುವ, ಸಂಭ್ರಮಿಸಿದ ಮಹಿಳೆಯರು ಈ ರೀತಿ ಪರಿವಾರದ ಒತ್ತ್ತಡಕ್ಕೆ ಮಣಿಯುವರೇ??
