ವರದಿಗಾರ (ಜ.8): ಇತ್ತೀಚೆಗೆ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿರುವ ದೀಪಕ್ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದೀಪಕ್ ರಾವ್ ಹತ್ಯೆಗೆ ಎಸ್.ಡಿ.ಪಿ.ಐ ನಿಂದ 50 ಲಕ್ಷ ರೂ. ಸುಪಾರಿ’ ಎಂಬ ಬಿಜೆಪಿಯ ಆರ್. ಅಶೋಕ್ ಹೇಳಿಕೆಗೆ ಎಸ್.ಡಿ.ಪಿ.ಐ ದ.ಕ. ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಹತ್ಯೆಯ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ಕೈವಾಡವಿದೆ ಎಂದು ಹೇಳಿಕೆಯನ್ನು ನೀಡಿದ್ದೆವು. ಇದೀಗ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ನೀಡಿರುವ ಹೇಳಿಕೆ ‘ದೀಪಕ್ ರಾವ್ ಹತ್ಯೆಗೆ ಸುಪಾರಿ ನೀಡಿರುವುದು ಸ್ಥಳೀಯ ಬಿಜೆಪಿ ಕಾರ್ಪೋರೇಟರ್’. ಈ ಹೇಳಿಕೆಯಿಂದ ಬಿಜೆಪಿಯ ನಿಜ ಬಣ್ಣ ಬಯಲಾಗುತ್ತದೆ ಎಂದರಿತ ಬಿಜೆಪಿಯ ರಾಜ್ಯ ನಾಯಕ ಆರ್. ಅಶೋಕ್ ರವರು ಎಸ್.ಡಿ.ಪಿ.ಐ ಮೇಲೆ ಆರೋಪ ಹೊರಿಸಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ ಪ್ರತಿಕ್ರಿಯಿಸಿದ್ದಾರೆ.
ಇದು ಪ್ರಕರಣದ ಸತ್ಯಾಸತ್ಯತೆಯನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ. ಬಿಜೆಪಿಯು ನಿರಾಧಾರ ಆರೋಪ ಹೊರಿಸುವುದರಲ್ಲಿ ಎತ್ತಿದ ಕೈ. ಕುಮಾರಸ್ವಾಮಿ ಹೇಳಿಕೆಯಂತೆ ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆಯುವಂತೆ ಮತ್ತು ನಿರಾಧಾರ ಆರೋಪ ಹೊರಿಸುವ ಬಿಜೆಪಿ ನಾಯಕರನ್ನು ಹದ್ದು ಬಸ್ತಿನಲ್ಲಿಡುವಂತೆ ಮತ್ತು ಈ ರೀತಿಯ ಹೇಳಿಕೆ ಕೊಟ್ಟು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಎಸ್.ಡಿ.ಪಿ.ಐ ಸರಕಾರವನ್ನುಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
