ವರದಿಗಾರ (ಡಿ 7) : ಪತ್ರಿಕೋದ್ಯಮಕ್ಕೆ ಕಳಂಕವೆಂಬಂತಿರುವ ಕನ್ನಡದ ಸುದ್ದಿ ಮಾಧ್ಯಮ ಪಬ್ಲಿಕ್ ಟಿವಿಯ ವಿರುದ್ಧದ ಜನಾಕ್ರೋಶ ದಿನೇ ದಿನೇ ಹೆಚ್ಚಾಗುತ್ತಿರುವಂತೆ ಭಾಸವಾಗುತ್ತಿದೆ. ಜನವರಿ ಮೂರರಂದು ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಸಂಘಪರಿವಾರದ ಏಳು ಜನ ನರಹಂತಕರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಶೀರ್ ಇಂದು ಮೃತರಾಗಿದ್ದು, ಇಡೀ ರಾಜ್ಯವೇ ಘಟನೆಯ ಕುರಿತು ಅರಿತಿರಲು ಪಬ್ಲಿಕ್ ಟಿವಿಗೆ ಮಾತ್ರ ಬಶೀರ್ ಅವರು ಗುಂಪುಘರ್ಷಣೆಯಲ್ಲಿ ತಲವಾರು ದಾಳಿಗೊಳಗಾಗಿ ಗಾಯಗೊಂಡರೆಂಬ ಹಸಿ ಸುಳ್ಳನ್ನು ವರದಿ ಮಾಡಿ, ಇಡೀ ರಾಜ್ಯದ ಜನರ ಆಕ್ರೋಶಕ್ಕೆ ತುತ್ತಾಗಿದೆ.
ಸುಳ್ಳುಸುದ್ದಿಗಳಿಗೆ ಸೀಮಿತವಾಗಿರುವ ಪಬ್ಲಿಕ್ ಟಿವಿಯ ಮೇಲೆ ಜನರಿಗೆ ವಿಶ್ವಾಸಾರ್ಹತೆ ಇಲ್ಲವಾದರೂ , ಇಡೀ ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಘಟನೆಯೊಂದರ ಸತ್ಯಾಸತ್ಯತೆಯನ್ನು ಮರೆಮಾಚಿ ಯಾರನ್ನೋ ಮೆಚ್ಚಿಸಲೆಂಬಂತೆ ಸುಳ್ಳು ಸುದ್ದಿಯನ್ನು ವರದಿ ಮಾಡಿರುವ ಚಾನೆಲ್ ವಿರುದ್ಧದ ಆಕ್ರೋಶ ಆಸ್ಪತ್ರೆಯ ಆವರಣದಲ್ಲೇ ಸ್ಪೋಟಗೊಂಡಿದ್ದು, ಅಲ್ಲಿ ನೆರೆದಿದ್ದ ಸಾರ್ವಜನಿಕರು ಪಬ್ಲಿಕ್ ಟಿವಿಯ ತಂಡವನ್ನು ಓಡಿಸಿದ್ದಾರೆ. ಕೋಮು ಘರ್ಷಣೆಗಳ ಬೆಂಕಿಗೆ ತುಪ್ಪ ಸುರಿಯುತ್ತಿರುವ ಪಬ್ಲಿಕ್ ಟಿವಿಯನ್ನು ಇಲ್ಲಿ ಮಾತ್ರವಲ್ಲ ಇಡೀ ರಾಜ್ಯದ ಜನತೆ ಓಡಿಸಬೇಕೆಂದು ಆಕ್ರೋಶಿತ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
‘ಪಬ್ಲಿಕ್’ ಆಕ್ರೋಶದ ವೀಡಿಯೋ
ಮಂಗಳೂರಿನ ಕಾಟಿಪಳ್ಳದಲ್ಲಿ ರೌಡಿಗಳ ಗುಂಪೊಂದರಿಂದ ಹತ್ಯೆಯಾಗಿದ್ದ ದೀಪಕ್ ಕೊಲೆಗೆ ಪ್ರತೀಕಾರವಾಗಿ ಅದೇ ದಿನ ರಾತ್ರಿ ನಗರದ ಕೊಟ್ಟಾರ ಚೌಕಿ ಬಳಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ಬಶೀರ್ ಎಂಬವರ ಮೇಲೆ ಸಂಘಪರಿವಾರದ ಏಳು ಜನ ನರಹಂತಕರು ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದರು. ಮೂರು ಬೈಕುಗಳಲ್ಲಿ ಬಂದಿದ್ದ ಏಳು ಜನ ನರಹಂತಕರು ತಲವಾರುಗಳಿಂದ ಯದ್ವಾ ತದ್ವಾ ಬಶೀರ್ ರವರ ಮೇಲೆ 17 ಬಾರಿ ಕೊಚ್ಚಿ ಹಾಕಿದ್ದರು. ನಂತರ ಪೊಲೀಸರು ಆರೋಪಿಗಳಲ್ಲಿ ನಾಲ್ಕು ಜನರನ್ನು ಬಂಧಿಸಿದ್ದರು. ನಗರದ ಎ ಜೆ ಆಸ್ಪತ್ರೆಗೆ ದಾಖಲಾಗಿ , ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಶೀರ್ ರವರು ಇಂದು ಬೆಳಗ್ಗೆ ಮೃತರಾಗಿದ್ದರು.
ಇತ್ತೀಚೆಗೆ ಕನ್ನಡದ ಸುದ್ದಿ ವಾಹಿನಿಯೊಂದು ಪಬ್ಲಿಕ್ ಟಿವಿಯ ಸುಳ್ಳಿನ ಬಂಡವಾಳವನ್ನು ರಾಜ್ಯದ ಜನರ ಮುಂದೆ ಜಗಜ್ಜಾಹೀರುಗೊಳಿಸಿತ್ತು. ಆದರೂ ಕೂಡಾ ಪಬ್ಲಿಕ್ ಟಿವಿ ತನ್ನ ಸುಳ್ಳಿನ ಸರಮಾಲೆಗಳನ್ನು ಜನರ ಧಾರ್ಮಿಕ ಭಾವನೆಗಳ ವಿಚಾರದಲ್ಲೂ ಮುಂದುವರಿಸಿದ್ದು ನಾಚಿಕೆಗೇಡಿನ ವಿಚಾರವಾಗಿದೆ.
