ವರದಿಗಾರ (ಜ.7): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ಜನವರಿ 03ರಂದು ರಾತ್ರಿ ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಜರಂಗದಳ ಕಾರ್ಯಕರ್ತರಿಂದ ಗಂಭೀರ ಹಲ್ಲೆಗೊಳಗಾಗಿ ನಗರದ ಎ.ಜೆ. ಆಸ್ಪತ್ರೆಯಲ್ಲಿ ಜಿಂತಾಜನಕ ಸ್ಥಿತಿಯಲ್ಲಿದ್ದ ಆಕಾಶಭವನ ನಿವಾಸಿ ಅಹಮ್ಮದ್ ಬಶೀರ್ (47) ಭಾನುವಾರ ಬೆಳಿಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಶೀರ್ ಅವರಿಗೆ ಹಲವು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ತೀವ್ರನಿಗಾ ಘಟಕದಲ್ಲಿದ್ದ ಅವರು ಬೆಳಿಗ್ಗೆ 8.05ಕ್ಕೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.
ಬಶೀರ್ ಮೇಲೆ ದಾಳಿ ನಡೆಸಿದ್ದ ಪಡೀಲ್ ನಿವಾಸಿ ಸಹೋದರರಾದ ಧನುಷ್, ಕಿಶನ್, ಕಾಸರಗೋಡು ಜಿಲ್ಲೆಯ ಶ್ರೀಜಿತ್ ಮತ್ತು ಸಂದೇಶ್ ಕೋಟ್ಯಾನ್ ಎಂಬ ಯುವಕರನ್ನು ನಗರ ಅಪರಾಧ ಘಟಕದ ಪೊಲೀಸರು ಶನಿವಾರ ಬಂಧಿಸಿದ್ದರು.
ಕೂಳೂರಿನಲ್ಲಿ ಅಂತ್ಯ ಸಂಸ್ಕಾರ:
ಅಹಮ್ಮದ್ ಬಶೀರ್ ಮೃತದೇಹದ ಅಂತ್ಯ ಸಂಸ್ಕಾರ ಕೂಳೂರಿನ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಸರಕಾರದಿಂದ ಮೃತ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ:
ಸರಕಾರ ಮೃತ ಅಹಮ್ಮದ್ ಬಶೀರ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.
ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
