ವರದಿಗಾರ (ಜ.6): ಕಳೆದ ವಾರ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ‘ಯಾವುದೇ ಕಾರಣಕ್ಕೂ ವರಿಷ್ಠರು ತೀರ್ಮಾನಿಸುವವರೆಗೂ ಅಭ್ಯರ್ಥಿಗಳ ಹೆಸರನ್ನು ಘೋಷಿಸದಂತೆ’ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರಿಗೆ ಅವರು ಸೂಚಿನೆ ನೀಡಿದ್ದರು.
ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ಗೆ ಬಿಟ್ಟಿದ್ದು, ನೀವು ಕೇವಲ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಗಮನ ಹರಿಸಬೇಕು. ಉಳಿದ ಎಲ್ಲಾ ಸಂಗತಿಗಳನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಅಮಿತ್ ಷಾ ಇತ್ತೀಚೆಗೆ ಸೂಚಿಸಿದ್ದರು. ಆದರೆ ವರಿಷ್ಠರ ಸೂಚನೆಗೆ ಬೆಲೆ ಕೊಡದೆ ಪುನಃ ಅಭ್ಯರ್ಥಿಗಳನ್ನು ಯಡಿಯೂರಪ್ಪ ಅವರೇ ಘೊಷಿಸುತ್ತಿರುವುದು ರಾಜ್ಯ ನಾಯಕರು ಹಾಗೂ ಆಕಾಂಕ್ಷಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷರು ಹೋದೆಡೆಯಲ್ಲೆಲ್ಲಾ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಾರೆ. ಇದರಿಂದ ಕ್ಷೇತ್ರಗಳಲ್ಲಿ ಬಣಗಳು ಸೃಷ್ಟಿಯಾಗುತ್ತಿದೆ. ಇದು ಪಕ್ಷಕ್ಕೆ ಮುಳುವಾಗಬಹುದೆಂಬ ಕಳವಳದಿಂದ ಕೆಲ ನಾಯಕರು ವರಿಷ್ಠರ ಬಳಿ ಅಳಲು ತೋಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಪರಿವರ್ತನಾ ರ್ಯಾಲಿ ವೇಳೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಮತ್ತೆ ಘೋಷಣೆ ಮಾಡುತ್ತಿರುವ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವರ್ತನೆಗೆ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದೆ. ನಿನ್ನೆ ಬಳ್ಳಾರಿ ಜಿಲ್ಲೆಯ ಅಗರಿ ಬೊಮ್ಮನಹಳ್ಳಿಯಲ್ಲಿ ಮಾಜಿ ಶಾಸಕ ನೇಮಿನಾಯಕ್ ಮುಂದಿನ ಅಭ್ಯರ್ಥಿ ಎಂದು ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು. ಇದರಿಂದ ರಾಜ್ಯ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅವರು ಯಡಿಯೂರಪ್ಪ ಅವರಿಗೆ ಅಭ್ಯರ್ಥಿಗಳನ್ನು ಘೋಷಿಸದಂತೆ ಸೂಚಿಸಬೇಕಿತ್ತು. ಆದರೆ ಅವರು ರಾಜ್ಯಾಧ್ಯಕ್ಷರ ಹೇಳಿಕೆಯನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕೆಂದು ಕೆಲ ನಾಯಕರು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿ ಆರಂಭವಾದ ನಂತರ ತುಮಕೂರು ನಗರಕ್ಕೆ ಜ್ಯೋತಿಗಣೇಶ್, ದಾವಣಗೆರೆ ಉತ್ತರಕ್ಕೆ ಎಸ್.ಎ.ರವೀಂದ್ರನಾಥ್, ಹೊನ್ನಾಳಿಗೆ ರೇಣುಕಾಚಾರ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ ಆ ಕ್ಷೇತ್ರದಲ್ಲೆಲ್ಲಾ ಬಣಗಳು ಸೃಷ್ಟಿಯಾಗಿವೆ. ಕೆಲವು ಸ್ಥಳಗಳಲ್ಲಿ ಬಣಗಳ ಒಳ ಜಗಳದಿಂದ ನಡೆಯಬೇಕಿದ್ದ ಸಮಾವೇಶನವನ್ನೇ ರದ್ದುಪಡಿಸಲಾಗಿದೆ.
