ರಾಷ್ಟ್ರೀಯ ಸುದ್ದಿ

ಭೀಮಾ-ಕೋರೆಗಾಂವ್ ದಲಿತ ವಿರೋಧಿ ಹಿಂಸಾಚಾರದ ಪ್ರಮುಖ ಆರೋಪಿಗಳಿಗೆ ಬಿಜೆಪಿ – ಆರೆಸ್ಸೆಸ್ ನಂಟು??

ಆರೋಪಿಗಳಲ್ಲೊಬ್ಬರನ್ನು ಲೋಕಸಭೆ ಚುನಾವಣೆಗೆ ಮುನ್ನ ಭೇಟಿ ಮಾಡಿ, ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದರು ಪ್ರಧಾನ ಮಂತ್ರಿ!!

ವರದಿಗಾರ (03-01-2018) : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಹಿಂದುತ್ವ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಹಾರಾಷ್ಟ್ರದ ಹಿಂದುತ್ವ ನಾಯಕರಾದ ಸಂಭಾಜಿ ಭಿಡೆ ಹಾಗೂ ಮಿಲಿಂದ್ ಏಕ್ಭೋಟೆ ಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರು ದಲಿತ ನಾಯಕ ಗೋವಿಂದ್ ಗಾಯಿಕ್ವಾಡ್ ರ ಸಮಾಧಿಯನ್ನು ಡಿಸೆಂಬರ್ 29ರಂದು ಹಾನಿಗೊಳಿಸುವ ಮೂಲಕ ಮರಾಠಾ – ದಲಿತ ಸಂಘರ್ಷಕ್ಕೆ ನಾಂದಿ ಹಾಡಿದರು.

ಮೊಘಲರ ದ್ವೇಷದ ಭಯದಿಂದ ಛತ್ರಪತಿ ಶಿವಾಜಿಯ ಮಗನಾದ ಸಂಭಾಜಿ ರಾಜೆ ಭೊಸಾಲೆಯ ಮರಣೋತ್ತರ ಕರ್ಮಗಳನ್ನು ನೆರವೇರಿಸಲು ಯಾರೂ ಮುಂದೆ ಬರದಿದ್ದಾಗ ಗೋವಿಂದ್ ಗಾಯಿಕ್ವಾಡ್ ಮುಂದೆ ಬಂದು ಅವರ ಅಂತ್ಯಕ್ರಿಯೆಯನ್ನು ನಡೆಸಿದರು ಎಂದು ನಂಬಲಾಗಿದೆ. ಆದರೆ ಸಂಭಾಜಿ ಭಿಡೆ ಹಾಗೂ ಮಿಲಿಂದ್ ಏಕ್ಬೋಟೆ ಇದನ್ನು ಬ್ರಿಟಿಷರು ಹರಡಿದ ಸುಳ್ಳೆಂದೂ, ಸಂಭಾಜಿ ರಾಜೆಯ ಅಂತ್ಯಕ್ರಿಯೆಯನ್ನು ಮರಾಠರು ನಡೆಸಿದ್ದರೆಂದೂ ವಾದಿಸುತ್ತಾ, ಈ ಬಗ್ಗೆ ಅಧ್ಯಯನ ನಡೆಸಲು ಸರಕಾರವು ಸಮಿತಿಯೊಂದನ್ನು ನೇಮಿಸಬೇಕೆಂದೂ ಆಗ್ರಹಿಸಿದ್ದರು.

ಜನವರಿ 1ರಂದು ಭೀಮಾ-ಕೋರೆಗಾಂವ್ ಪ್ರದೇಶದಲ್ಲಿ ದಲಿತರು ವಿಜಯೋತ್ಸವ ಆಚರಿಸಲು ರಾಜ್ಯದ ವಿವಿಧ ಭಾಗಗಳಿಂದ ಬಂದು ಒಟ್ಟು ಸೇರುತ್ತಾರೆಂದು ತಿಳಿದೂ, ಡಿಸೆಂಬರ್ 29ರಂದು ದಲಿತ ದಂತಕತೆಯ ಸಮಾಧಿಯನ್ನು ಹಾನಿಗೊಳಿಸಿದ್ದು, ಹಿಂಸಾಚಾರ ಪೂರ್ವನಿಯೋಜಿತ ಎನ್ನುವುದಕ್ಕೆ ಪುರಾವೆಯಾಗಿದೆ. ಜನವರಿ 1ರಂದು ದಲಿತರು ವಿಜಯೋತ್ಸವ ಆಚರಿಸುತ್ತಿದ್ದ ಪ್ರದೇಶಕ್ಕೆ ಹಿಂದುತ್ವ ಗಲಭೆಕೋರರು ಮೆರವಣಿಗೆ ನಡೆಸಿದಾಗ ಹಿಂಸಾಚಾರವು ಪ್ರಾರಂಭವಾಯಿತು.

ಆರೋಪಿಗಳಿಗೆ ಆರೆಸ್ಸೆಸ್-ಬಿಜೆಪಿ ನಂಟು:
ಅರೋಪಿ ಹಿಂದುತ್ವ ನಾಯಕ ಮಿಲಿಂದ್ ಏಕ್ಬೋಟೆಯ ಕುಟುಂಬವೇ ಆರೆಸ್ಸೆಸ್ ನಂಟು ಹೊಂದಿದೆ. ಮಿಲಿಂದ್ 1997ರಿಂದ 2002ರ ವರೆಗೆ ಪುಣೆಯ ಬಿಜೆಪಿ ಕಾರ್ಪೊರೇಟರ್ ಆಗಿದ್ದನು. ಎರಡನೆಯ ಅವಧಿಗೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದಾಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದನು. ನಂತರ 2007ರಲ್ಲಿ ಸೋಲನುಭವಿಸಿದ್ದ ಮಿಲಿಂದ್, ಅದೇ ವರ್ಷ ಹಿಂದೂ ಏಕತಾ ಮಂಚ್ ಸ್ಥಾಪಿಸಿದ್ದನು. ಅಂದಿನಿಂದ ಪ್ರೇಮಿಗಳ ದಿನವನ್ನು ವಿರೋಧಿಸಿ ಈ ಸಂಘಟನೆ ಇಂದಿನವರೆಗೆ ಸುದ್ದಿಯಲ್ಲಿದೆ. 2014ರಲ್ಲಿ ಶಿವಸೇನೆಯಿಂದ ವಿಧಾನ ಸಭೆಗೆ ಸ್ಪರ್ದಿಸಿ ಸೋಲನುಭವಿಸಿದ್ದನು. ಈತನ ಸಹೋದರಿ ಜ್ಯೋಸ್ನಾ ಏಕ್ಬೋಟೆ ಪುಣೆಯಲ್ಲಿ ಬಿಜೆಪಿಯ ಹಾಲಿ ಕಾರ್ಪೊರೇಟರ್ ಆಗಿದ್ದಾರೆ.

ಮಿಲಿಂದ್ ಏಕ್ಬೋಟೆಯ ಮೇಲೆ ಈ ವರೆಗೆ 12 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, 5 ಪ್ರಕರಣಗಳಲ್ಲಿ ಈತನು ದೋಷಿಯಾಗಿದ್ದಾನೆ.

ಸಾಂಗ್ಲಿ, ಸಾತಾರ ಹಾಗೂ ಕೋಲಾಪುರದಲ್ಲಿ ಹಿಂದುತ್ವ ಕಾರ್ಯಕರ್ತರ ನಾಯಕನಾಗಿರುವ ಸಂಭಾಜಿ ಭಿಡೆ, ಹಿಂದುತ್ವವಾದಿಗಳ ನಡುವೆ ‘ಗುರೂಜಿ’ ಎಂದೇ ಅರಿಯಲ್ಪಡುತ್ತಿದ್ದಾನೆ. 85 ವರ್ಷ ಪ್ರಾಯದ ಭಿಡೆ ಈಗಲೂ ಸೈಕಲ್ ಮೂಲಕ ಸುತ್ತಾಡುತ್ತಿರುತ್ತಾನೆ. ಪಾದರಕ್ಷೆ ಧರಿಸದೆ ನಡೆಯುವ ಈತ ಪರಮಾಣು ಭೌತ ಶಾಸ್ತ್ರದಲ್ಲಿ M. Sc. ಪದವಿಯನ್ನೂ, ಚಿನ್ನದ ಪದಕವನ್ನೂ ಪಡೆದಿದ್ದನು. ಪುಣೆಯ ಕಾಲೇಜೊಂದರಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕನಾಗಿದ್ದ ಈತ ನಂತರ ಆರೆಸ್ಸೆಸ್ ಸೇರಿ ‘ಪ್ರಚಾರಕ್’ ಆಗಿ ಗುರುತಿಸಲ್ಪಟ್ಟಿದ್ದನು. 1980ರಲ್ಲಿ ಶಿವ ಪ್ರತಿಷ್ಟಾನ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದ ಈತನು ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಸುದ್ದಿಯಲ್ಲಿದ್ದನು.

2014ರ ಲೋಕಸಭೆಯ ಚುನಾವಣೆಯ ಮುನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ತನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವ ಮುನ್ನ ಈತನನ್ನು ಭೇಟಿಯಾಗಲು ಬಂದಿದ್ದರು. ಸಾಂಗ್ಲಿಯ ಈತನ ಮನೆಯಲ್ಲಿ ಭೇಟಿಯಾಗಿ, ಪಾದವನ್ನು ಸ್ಪರ್ಶಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, “ಸಾಂಗ್ಲಿಗೆ ನಾನೇ ಬಂದದ್ದಲ್ಲ, ನಿಮ್ಮ ನಗರಕ್ಕೆ ಬರಲು ಭಿಡೆ ಗುರೂಜಿ ನನಗೆ ಆದೇಶ ನೀಡಿದ್ದರು. ಆ ಪ್ರಕಾರ ನಾನು ಇಲ್ಲಿದ್ದೇನೆ” ಎಂದು ಹೇಳಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group