ವರದಿಗಾರ (ಜ 2 ) : ಕಳೆದ ಡಿಸೆಂಬರ್ 20 ರಂದು ಕುಕ್ಕೆಸುಬ್ರಹ್ಮಣ್ಯದಲ್ಲಿ ಚಿತ್ರನಟ ಮತ್ತು ನಟಿಯನ್ನು ವಿನಾ ಕಾರಣ ಬಂಧಿಸಿ ಇವರಿಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ನಡೆಸಿದಂತಹ ದೈಹಿಕ ಮತ್ತು ಮಾನಸಿಕ ದೌರ್ಜನ್ಯವನ್ನು ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಸಮಿತಿಯುತೀವ್ರವಾಗಿ ಖಂಡಿಸುತ್ತದೆ.
ಕುಕ್ಕೆ ಸುಬ್ರಹ್ಮಣ್ಯದೇವಸ್ಥಾನಕ್ಕೆ ಪೂಜೆಗಾಗಿ ಮೈಸೂರು ಮೂಲದ ತಮಿಳು ಚಿತ್ರನಟಿ ಬರುವಾಗ ತನ್ನ ಸ್ನೇಹಿತ, ಕಿರು ಚಿತ್ರನಟ ಕಲ್ಲೋಣಿಯ ಫರ್ವೇಝ್ ನನ್ನು ಮಾತನಾಡಲು ಬರುವಂತೆ ಸೂಚಿಸಿದ್ದು ಆ ನಿಟ್ಟಿನಲ್ಲಿ ಅವನು ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸಾಗಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡ ಸಂಘಪರಿವಾರದ ಕಾರ್ಯಕರ್ತರು ಮತ್ತು ಪೊಲೀಸರು ಜೊತೆಗೂಡಿ ನಟಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬೆಳ್ಳಾರೆಯಲ್ಲಿದ್ದ ಫರ್ವೇಝ್ ನಿಗೆ ನಟಿಯ ಮೊಬೈಲಿನಿಂದ ಬಲಾತ್ಕಾರವಾಗಿ ಕರೆ ಮಾಡಿಸಿ ಕರೆಸಿಕೊಂಡು ಆತನ್ನು ಕೂಡ ಅನಧಿಕೃತವಾಗಿ ಠಾಣೆಯಲ್ಲಿ ಕೂಡಿ ಹಾಕಿದ್ದು, ಆತ ನಾನು ಚಿತ್ರನಟ ನಾವಿಬ್ಬರು ಚಿತ್ರದಲ್ಲಿ ಒಟ್ಟಿಗೆ ನಟಿಸಿರುವವರು, ಸ್ನೇಹಿತರು ಎಂದು ಪೊಲೀಸರಿಗೆ ಕೇಳಿಕೊಂಡರೂ ಕೂಡ, ಆತನನ್ನು ಎಳೆದಾಡಿ, ನೆಲಕ್ಕೆ ಹಾಕಿ ಬೂಟು ಕಾಲಿನಿಂದ ಒದ್ದು, ಜಾತಿನಿಂದನೆ ಮಾಡಿ ಉಗ್ರಗಾಮಿ ನೀವು ಬ್ಯಾರಿಗಳು ಎಂದೆಲ್ಲಾ ಹೀಯಾಳಿಸಿ 7 ಮಂದಿ ಪುರುಷ ಪೊಲೀಸರು ಹಾಗು 1 ಮಹಿಳಾ ಪೊಲೀಸರು 3 ಲಾಠಿಗಳು ಪುಡಿಯಾಗುವ ರೀತಿಯಲ್ಲಿ ಹೊಡೆದು ಮೇಜಿನ ಮೇಲೆ ಮಲಗಿಸಿ ಕರೆಂಟ್ ಶಾಕ್ ಕೂಡಾ ಕೊಟ್ಟಿರುತ್ತಾರೆ, ನಾನು ಅಪಘಾತಕ್ಕೆ ಒಳಗಾದವ, ಸರ್ಜರಿ ಆಗಿದೆ ಎಂದರೂ ಬಿಡದ ಪ್ರಶಾಂತ್ಕುಮಾರ್, ಚಂದ್ರಗೌಡ, ನಾರಾಯಣ, ಸಂಧ್ಯಾ ಮತ್ತು ಇತರ 4 ಪೊಲೀಸರು ಮನ ಬಂದಂತೆ ಮಾನವೀಯತೆ ಇಲ್ಲದ ರೀತಿಯಲ್ಲಿ ಹೊಡೆದಿರುತ್ತಾರೆ. ಇದು ಬಹಳ ಅಮಾನವೀಯ ಘಟನೆಯಾಗಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
ಕೇಸ್ ಕೂಡ ದಾಖಲಾಗದೇ ಈ ರೀತಿ ವರ್ತಿಸಲು ಪೊಲೀಸರಿಗೆ ಅಧಿಕಾರ ಕೊಟ್ಟದ್ದು ಯಾರು, ಇವರು ಪೊಲೀಸರ ಅಥವಾ ಸಂಘ ಪರಿವಾರದ ಗೂಂಢಾಗಳಾ ಎಂಬ ಸಂಶಯ ನಮಗಿದೆ. ಸುಬ್ರಹ್ಮಣ್ಯ ಪೊಲೀಸ್ ಉಪನಿರೀಕ್ಷಕರಿಗಾಗಲಿ ವೃತ್ತನರೀಕ್ಷಕರಿಗಾಗಲಿ ಯಾವುದೇ ಮಾಹಿತಿ ಕೊಡದೆ ಠಾಣೆಯ ಒಳಗೆ ಹಾಕಿ ವಸ್ತ್ರಗಳನ್ನು ಕಳಚಿ ಹಲ್ಲೆಗೈದಿರುವುದು ಕಾನೂನಿನ ಉಲ್ಲಂಘನೆಯಾಗಿದೆ, ಅದೇ ರೀತಿ ಠಾಣೆಯ ಒಳಗೆ ಸಂಘಪರಿವಾರದ ಗೂಂಡಾಗಳು ಕೂಡ ಹಲ್ಲೆ ನಡೆಸಿದ್ದು ಮತ್ತು ನಟಿಯ ಮೇಲೂ ಹಲ್ಲೆ ನಡೆಸಿರುವುದು ನಟಿಯು ಸ್ವತಃ ಮಾಡಿದ ವೀಡಿಯೋದಿಂದ ಬಹಿರಂಗಗೊಂಡಿದೆ. ನಟಿಯ ಮನೆಯವರು ಫರ್ವೇಝ್ ನನ್ನು ನಮಗೆ ಪರಿಚಯಸ್ಥ ಎಂದಾಗಲೂ ಪೊಲೀಸರು ಕ್ರೌರ್ಯ ನಿಲ್ಲಿಸಲಿಲ್ಲ, ನಂತರ ಬಿಡುಗಡೆ ಮಾಡುವಾಗ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿ 5 ಖಾಲಿ ಹಾಳೆಯಲ್ಲಿ ಸಹಿ ಹಾಕಿಸಿ ಕೊಂಡಿರುತ್ತಾರೆ.
ಘಟನೆ ನಡೆದು 10 ದಿವಸ ಕಳೆದರೂ ಯಾವುದೇ ರೀತಿಯಲ್ಲಿ ಬಹಿರಂಗಗೊಂಡಿರಲಿಲ್ಲ, ಆದರೆ ಇಷ್ಟೆಲ್ಲಾ ಆವಾಂತರ ನಡೆದಿರುವುದು ಸಬ್ ಇನ್ಸ್’ಪೆಕ್ತರ್ ರವರಿಗಾಗಲೀ ಅಥವಾ ಇನ್ಸ್’ಪೆಕ್ತರ್ ರವರಿಗಾಗಲೀ ಮಾಹಿತಿಯನ್ನು ಈ ಪೊಲೀಸರು ನೀಡದಿರುವುದು ವಿಪರ್ಯಾಸ ಹಾಗೂ ಫರ್ವೇಝ್ ನನ್ನು ಠಾಣೆಯಲ್ಲಿ ವಿವಸ್ತ್ರಗೊಳಿಸಿರುವ ಫೋಟೋ ಸಂಘಪರಿವಾರದ ಫೇಸ್ಬುಕ್ ಪೇಜ್ಗಳಲ್ಲಿ ಕ್ಷಣಾರ್ಧದಲ್ಲೇ ಹರಿದಾಡತೊಡಗಿದೆ. ಇದು ಅಲ್ಲಿನ ಪೊಲೀಸರ ಮನಸ್ಥಿತಿ ಹಾಗೂ ಪೊಲೀಸರು ಸಂಘಪರಿವಾರದ ಏಜೆಂಟರಂತೆ ವರ್ತಿಸಿರುವುದು ವ್ಯಕ್ತವಾಗುತ್ತಿದೆ. ಫರ್ವೇಝ್ ಘಟನೆಯನ್ನು ಬಹಿರಂಗಗೊಳಿಸದಿರಲು ಕಾರಣ ಆತನನ್ನು ಸುಳ್ಳು ಕೇಸು ಹಾಕಿ ಸಿಲುಕಿಸುವುದಾಗಿ ಪೊಲೀಸರು ಬೆದರಿಸಿದ್ದರು.
ಇದೀಗ ನಾವು ಮಾಧ್ಯಮದವರಿಗೆ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ವಿಷಯ ತಿಳಿಸಿದಾಗ ಅದುವರೆಗೆ ಯಾರಿಗೂ ಈ ಪ್ರಕರಣ ತಿಳಿಯದಿರುವುದು ಬಹಳ ದರಂತವಾದಂತಹ ಸಂಗತಿ. ಆದುದರಿಂದ ಕೂಡಲೇ ಪೊಲೀಸ್ ಇಲಾಖೆ ಮತ್ತು ಸರಕಾರ 8 ಮಂದಿ ಪೊಲೀಸರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಸಮಿತಿಯು ಆಗ್ರಹಿಸುತ್ತದೆ.
ಪತ್ರಿಕಾಗೋಷ್ಟಿಯಲ್ಲಿ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ, ಉಮ್ಮರ್ ಕೆ.ಎಸ್, ಅಧ್ಯಕ್ಷರು ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಕ್ಷೇತ್ರ, ಮುಸ್ತಫಾ ಎಮ್.ಕೆ ಕಾರ್ಯದರ್ಶಿ ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಕ್ಷೇತ್ರ, ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರುಗಳಾದ ಅಬ್ದುರ್ರಹ್ಮಾನ್ ಅಡ್ಕಾರ್ ಹಾಗೂ ಅಬ್ದುಲ್ ಹಮೀದ್ ಅಡ್ಕಾರ್ ಮತ್ತು ಸದಸ್ಯರಾದ ಹಮೀದ್ ಮರಕ್ಕಡ ಉಪಸ್ಥಿತರಿದ್ದರು.
