ವರದಿಗಾರ (ಜ 1 ) : ಜನರ ರಕ್ಷಣೆಗೆಂದು ಸರಕಾರ ಪೊಲೀಸ್ ಇಲಾಖೆಯನ್ನು ನೇಮಿಸಿದೆ. ಆದರೆ ಪೊಲೀಸರೇ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಠಾಣೆಯಲ್ಲೇ ಕೂಡಿ ಹಾಕಿ ದೌರ್ಜನ್ಯ ನಡೆಸಿದರೆ ಇನ್ನು ಜನರೆಲ್ಲಿ ನ್ಯಾಯದ ನಿರೀಕ್ಷೆಯಿಟ್ಟುಕೊಳ್ಳಬಹುದು? ಅದೂ ಕೇವಲ ಅನ್ಯ ಧರ್ಮದ ನಟಿಯೊಬ್ಬಳನ್ನು ಭೇಟಿ ಮಾಡಿದಂತಹಾ ಕ್ಷುಲ್ಲಕ ವಿಚಾರಕ್ಕೆ !
ಮೈಸೂರು ಮೂಲದ ಅನುಷಾ ಎಂಬ ಯುವ ನಟಿಯೊಬ್ಬಳ ವೀಡಿಯೋ ಒಂದು ಕಳೆದೆರಡು ದಿನಗಳಿಂದ ವೈರಲ್ ಆಗುತ್ತಿದ್ದು, ನಡೆದ ಘಟನೆಯ ಬಗ್ಗೆ ವಿವರ ಕೇಳಲು ‘ವರದಿಗಾರ’ ತಂಡ ಸಂತ್ರಸ್ತ ಯುವ ನಟ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಬೆಳ್ಳಾರೆಯ ಪರ್ವೀಝ್ ಅವರನ್ನು ಸಂಪರ್ಕಿಸಿದಾಗ ಅವರಿಂದ ಸಿಕ್ಕ ಮಾಹಿತಿಗಳು ನಿಜಕ್ಕೂ ಜನರು ಪೊಲೀಸರ ಮೇಲೆ ಅನುಮಾನ ಪಡುವಂತೆ ಮಾಡಿದೆ.
ಸಂತ್ರಸ್ತ ನಟ ಪರ್ವೀಝ್ ಅವರೇ ಹೇಳಿರುವ ಪ್ರಕಾರ, “ನಾನು ಕಳೆದ ಹಲವಾರು ವರ್ಷಗಳಿಂದ ನನ್ನದೇ ಆದ ಹಾಡು, ಆಲ್ಬಂ ಎಂದು ಕೊಂಡು ಸಣ್ಣ ಮಟ್ಟದ ಕಲಾವಿದನಾಗಿದ್ದೆ. ಇತ್ತೀಚೆಗೆ ಒಂದೆರಡು ಸಿನಿಮಾಗಳಲ್ಲಿ ಕೂಡಾ ನಟಿಸಲು ಅವಕಾಶ ಸಿಕ್ಕಿದ್ದು, ಒಂದು ಸಿನೆಮಾ ಪೂರ್ತಿಯಾಗಿದ್ದು, ಇನ್ನೊಂದರ ಚಿತ್ರೀಕರಣ ನಡೆಯುತ್ತಿದೆ. ನನ್ನೊಂದಿಗೆ ಸಿನೆಮಾಗಳಲ್ಲಿ ಅಭಿನಯಿಸಿದ್ದ ನಟಿಯಾದ ಅನುಷಾರವರ ಪರಿಚಯ ಕೂಡಾ ನನಗಿತ್ತು. ಅವರು ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದಾಗ ಅವರನ್ನು ನಾನೂ ಪರಿಚಯದ ನೆಲೆಯಲ್ಲಿ ಭೇಟಿ ಮಾಡಿದ್ದೆ. ಇದನ್ನು ಗಮನಿಸಿದ್ದ ಅಲ್ಲಿನ ಕೆಲವರು ಅನುಷಾರವರಲ್ಲಿ ಈ ಕುರಿತು ವಿಚಾರಿಸಿದ್ದು, ಅವರ ಮೇಲೆ ಹಲ್ಲೆ ಕೂಡಾ ಮಾಡಿ ಓರ್ವ ಮುಸ್ಲಿಮನ ಜೊತೆ ನಿನಗೇನು ಗೆಳೆತನ ಎಂದೆಲ್ಲಾ ‘ಅನೈತಿಕ ಪೊಲೀಸ್ ಗಿರಿ’ ಮಾಡಿ ಹಲ್ಲೆ ನಡೆಸಿದ್ದಾರೆ. ಆ ವೇಳೆ ಅನುಷಾರವರು ತಮ್ಮ ಸಿನೆಮಾದ ಕಾರ್ಮಿಕ ಸಂಘದ ಗುರುತು ಚೀಟಿಯನ್ನೂ ಕೂಡಾ ತೋರಿಸಿದ್ದಾರೆ” ಎಂದು ಪರ್ವೀಝ್ ಘಟನೆಯ ಕುರಿತು ತಿಳಿಸುತ್ತಾರೆ.
“ಮರುದಿನ ನನ್ನನ್ನು ಆಟೋ ರಿಕ್ಷಾದಲ್ಲಿ ಬಂದ ನಾಗರಿಕ ಉಡುಪಿನಲ್ಲಿದ್ದ ಸುಬ್ರಮಣ್ಯ ಠಾಣೆಯ ಇಬ್ಬರು ಪೊಲೀಸರು ನನ್ನ ಮೊಬೈಲ್ ಹಾಗೂ ಪರ್ಸನ್ನು ಕಿತ್ತುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆ ವೇಳೆ ಠಾಣೆಯಲ್ಲಿ ಅನುಷಾ ಇದ್ದರು. ನನ್ನನ್ನು ಲಾಕಪ್ಪಿಗೆ ಹಾಕದೆ ಅಲ್ಲಿದ್ದ ಗೋಡೌನ್ ರೀತಿಯ ಕೋಣೆಯೊಂದರಲ್ಲಿ ಹಾಕಿ ನನ್ನ ಮೇಲೇ ತೀವ್ರ ರೀತಿಯ ಹಲ್ಲೆ ನಡೆಸಲಾಗಿದೆ. ನನ್ನ ಧರ್ಮದ ಬಗ್ಗೆ ತೀವ್ರ ನಿಂದನೆಗೈಯುತ್ತಿದ್ದ ಅವರು ಕೆಟ್ಟ ಪದಗಳಿಂದ ಬೈಯುತ್ತಾ ನನ್ನ ಮೇಲೆ ಹಲ್ಲೆ ನಡೆಸಿರುತ್ತಾರೆ. ಅಲ್ಲಿಗೆ ಅನುಷಾರವರನ್ನು ಕರೆದುಕೊಂಡು ಬಂದು ನಾವಿಬ್ಬರು ಪ್ರೇಮಿಗಳು ಎಂದು ಹೇಳುವಂತೆ ಒತ್ತಾಯಪಡಿಸಲಾಗಿತ್ತು. ಅದರಂತೆ ಆಕೆಯೂ ನನ್ನ ಮುಂದೆ ಅದನ್ನೇ ಹೇಳಿದ್ದಳು. ಅದರ ನಂತರವೂ ನನ್ನ ಮೇಲೆ ಹಲ್ಲೆ ಮುಂದುವರಿದಾಗ ಆಕೆ ಅಲ್ಲೇ ಕೇಳಿದ್ದಳು, ಸಾರ್, ನೀವು ಹೇಳಿ ಕೊಟ್ಟ ರೀತಿಯಲ್ಲಿ ಹೇಳಿದೆನಲ್ಲಾ, ಇನ್ನೂ ಯಾಕೆ ಅವನಿಗೆ ಹೊಡೆಯುತ್ತಿದ್ದೀರಿ?” ಎಂದು ಅನುಷಾ ಹೇಳಿದ್ದಾರೆಂದು ಪರ್ವೀಝ್ ನೆನಪಿಸುತ್ತಾರೆ.
ಮುಂದುವರಿದ ಪರ್ವೀಝ್, “ನನ್ನನ್ನು ಸಂಪೂರ್ಣವಾಗಿ ನಗ್ನಗೊಳಿಸಿ ಮಹಿಳಾ ಪೊಲೀಸ್ ಸಂಧ್ಯಾ, ಪ್ರಶಾಂತ್ ಕುಮಾರ್, ಚಂದ್ರಗೌಡ, ನಾರಾಯಣ ಸೇರಿದಂತೆ ಒಟ್ಟು ಎಂಟು ಮಂದಿ ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ. ನಿನಗೆ ಪಿ ಎಫ್ ಐ ಸಂಘಟನೆ 40 ಲಕ್ಷ ಕೊಡುತ್ತಿದೆ. ಅದಕ್ಕೆ ನೀನು ಹಿಂದೂ ಹುಡುಗಿಯರನ್ನು ಪ್ರೀತಿಸುವುದು ಎಂದೆಲ್ಲಾ ಹೇಳುತ್ತಾ ಮೂರು ಲಾಠಿಗಳು ಮುರಿಯುವ ರೀತಿಯಲ್ಲಿ ಥಳಿಸಿದ್ದಾರೆ. ಕೊನೆ ಪಕ್ಷ ನನ್ನ ಮನೆಯವರಿಗೆ ವಿಷಯ ತಿಳಿಸಿ ಎಂದಾಗ, ನಿನ್ನನ್ನು ಇಲ್ಲಿ ಕರೆದುಕೊಂಡು ಬಂದಿರುವುದು ಯಾರಿಗೂ ತಿಳಿದಿಲ್ಲ, ಯಾವುದೇ ದಾಖಲೆಗಳಿಲ್ಲ. ನಮ್ಮ ಸಬ್ ಇನ್ಸ್’ಪೆಕ್ಟರ್ ರಜೆಯಲ್ಲಿದ್ದಾರೆ. ಅವರಿಗೇ ಈ ಕುರಿತು ಮಾಹಿತಿ ನೀಡಿಲ್ಲ ನಾವು. ನಿನ್ನನ್ನು ಇಲ್ಲೇ ಕೊಂದು ಹಾಕಿದ್ರೂ ಕೇಳುವವರಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ನಂತರ ನನಗೆ ವಿದ್ಯುತ್ ಶಾಕ್ ಕೂಡಾ ಕೊಟ್ಟಿದ್ದಾರೆ. ನಾನು ಕಿರುಚಾಡುತ್ತಿರಲು ಅವರ ಕಾಲಿನ ಸಾಕ್ಸ್ ತೆಗೆದು ನನ್ನ ಬಾಯಿಗೆ ತುರುಕಿಸಿದ್ದಾರೆ. ‘ನಾನು ಕೊಟ್ಟಿರೋ ಏಟಿಗೆ ಬೇರೆ ಯಾರಾದ್ರೂ ಈ ಹೊತ್ತಿಗೆ ಸಾಯ್ತಾ ಇದ್ರು. ಆದ್ರೆ ನೀನು ದನ ತಿನ್ತೀಯ ಅದಕ್ಕೇ ಇನ್ನೂ ಬದುಕಿದ್ದೀಯಾ’ ಎಂದು ತೀವ್ರ ತರಹದ ಚಿತ್ರ ಹಿಂಸೆ ನೀಡಿದ್ದಾರೆ. ಠಾಣೆಯಲ್ಲಿದ್ದ ಪೊಲೀಸರು ಮಾತ್ರವಲ್ಲ ಹೊರಗಿನ ಇಬ್ಬರು ಆಟೊ ಡ್ರೈವರ್’ಗಳು ಕೂಡಾ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮಾತ್ರವಲ್ಲ ಪೊಲೀಸ್ ಪೇದೆಗಳಾದ ಪ್ರಶಾಂತ್ ಹಾಗೂ ಚಂದ್ರ ಎನ್ನುವವರು ಹೊರಗಿನ ಯಾರೊಂದಿಗೋ ನಿರಂತರ ಫೋನ್ ಸಂಪರ್ಕದಲ್ಲಿದ್ದರು. ಈತನನ್ನು ಸಂಜೆ 7 ಗಂಟೆಯ ನಂತರ ನಾವು ನಿಮಗೆ ಕೊಡ್ತೇವೆ ಎಂದೆಲ್ಲಾ ಹೇಳುವುದನ್ನು ನಾನು ಖುದ್ದು ಕೇಳಿದ್ದೆ. ಮೂರು ಮಂದಿ ಪೊಲೀಸರು ನನ್ನನ್ನು ನಗ್ನ ಸ್ಥಿತಿಯಲ್ಲೇ ವೀಡೀಯೋ ಕೂಡಾ ಮಾಡಿದ್ದಾರೆ. ಕುಡಿಯಲೊಂದು ಲೋಟ ನೀರು ಕೂಡಾ ಕೊಟ್ಟಿಲ್ಲ. ಮರುದಿನ ಬೆಳಗ್ಗೆ ಅನುಷಾರವರ ಪೋಷಕರನ್ನು ಠಾಣೆಗೆ ಕರೆಸಿದ್ದರು. ಅವರೂ ಕೂಡಾ ಪರ್ವೀಝ್ ನಮಗೆ ಗೊತ್ತಿರುವ ಹುಡುಗ, ಅನುಷಾ ಅವರ ಗೆಳೆತನದ ಬಗ್ಗೆ ನಮ್ಮೊಂದಿಗೆ ಹೇಳಿದ್ದಳು ಎಂದಾಗ, ಪೊಲೀಸರು ಇದೆಲ್ಲಾ ಈಗ ಹೇಳುವುದು ಬೇಡ. ನೀವು ಆದಷ್ಟು ಬೇಗ ಇಲ್ಲಿಂದ ತೆರಳಿ ಎಂದು ಅವರನ್ನು ಸಾಗ ಹಾಕಿದ್ದಾರೆ” ಎಂದು ಪರ್ವೀಝ್ ಹೇಳುತ್ತಾರೆ.
ನಂತರ ಬಿಡುಗಡೆಗೊಳಿಸುವಾಗ ಕೂಡಾ ನನಗೆ ಬೆದರಿಕೆ ಹಾಕಿದ ಇದೇ ಪೊಲೀಸರು, ‘ಯಾವುದೇ ಕಾರಣಕ್ಕೂ ನಾವು ಇಲ್ಲಿ ನಾವು ಕೊಟ್ಟಿರುವ ಚಿತ್ರಹಿಂಸೆಯನ್ನು ಎಲ್ಲಾದರೂ ಹೊರಗಡೆ ಹೇಳಿದ್ರೆ, ನೀನು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬಾಂಬ್ ಹಾಕಲು ಬಂದ ಭಯೋತ್ಪಾದಕ ಎಂದು ಕೇಸ್ ಹಾಕ್ತೀವಿ. ನೀನು ಸುಮ್ಮನಿದ್ರೆ ಒಳ್ಳೆಯದು” ಎಂದೆಲ್ಲಾ ಬೆದರಿಕೆ ಹಾಕಿ ನನ್ನಿಂದ ಐದು ಖಾಲಿ ಪೇಪರ್ ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ನಂತರ ನನ್ನನ್ನು ಬಿಡುಗಡೆಗೊಳಿಸಿದ್ದರು” ಎಂದು ಹೇಳುತ್ತಾ ಪರ್ವೀಝ್ ನಿಟ್ಟುಸಿರು ಬಿಡುತ್ತಾರೆ.
ಈ ಕುರಿತು ‘ವರದಿಗಾರ‘ ತಂಡ ಸುಬ್ರಮಣ್ಯ ಎ ಎಸ್ ಐ ಚಂದಪ್ಪರವರಲ್ಲಿ ಮಾಹಿತಿಗಾಗಿ ಸಂಪರ್ಕಿಸಿದಾಗ, ಪ್ರಕರಣವು ಇಲಾಖಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಆದ್ದರಿಂದ ಸುಳ್ಯ ವೃತ್ತ ನಿರೀಕ್ಷಕರನ್ನು ಸಂಪರ್ಕಿಸುವಂತೆ ತಿಳಿಸಿದರು. ಸುಳ್ಯ ವೃತ್ತ ನಿರೀಕ್ಷಕರ ಪ್ರಕಾರ, ಘಟನೆಯ ಕುರಿತು ಇಲಾಖೆಯೊಳಗೆ ತನಿಖೆಗೆ ಆದ್ದೇಶಿಸಿದ್ದು, ಪೊಲೀಸರು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ನಟಿಯ ವೀಡಿಯೋ ವೈರಲ್ !
ಮನೆಗೆ ಮರಳಿದ ನಟಿ ಅನುಷಾ ಒಂದು ಸೆಲ್ಫೀ ವೀಡಿಯೋ ಮಾಡಿದ್ದು, ಅದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅನುಷಾ ನಡೆದ ಎಲ್ಲಾ ಘಟನೆಗಳನ್ನು ವಿವರವಾಗಿ ತಿಳಿಸಿದ್ದು, ಪರ್ವೀಝ್ ರವರ ಮೇಲೆ ಠಾಣೆಯಲ್ಲಿ ಆಗಿರುವ ಹಲ್ಲೆಯನ್ನೂ ಉಲ್ಲೇಖಿಸಿದ್ದಾರೆ.
Video – 1
Video – 2
ಪೊಲೀಸ್ ಠಾಣೆಯೊಳಗಿನ ಫೋಟೋ ಹೊರಗೆ ಬಂದದ್ದು ಹೇಗೆ?
ಪೊಲೀಸರು ಅಮಾಯಕ ಪರ್ವೀಝ್ ನನ್ನುಯಾರಿಗೂ ತಿಳಿಸದೆ ಅಕ್ರಮ ಬಂಧನದಲ್ಲಿಟ್ಟಿದ್ದಾಗ, ಅವರಿಗೆ ಕೇವಲ ಒಂದು ಟವೆಲ್ ಕೊಟ್ಟು ಠಾಣೆಯಲ್ಲಿ ಕೂರಿಸಿದ್ದರು. ಆಗ ತೆಗೆದ ಫೋಟೋ, ಸಾಮಾಜಿಕ ತಾಣಗಳಲ್ಲಿ ಕೋಮು ಪ್ರಚೋದಕ ಪೋಸ್ಟ್ ಗಳನ್ನು ಹಾಕುವ, ಸಮಾಜ ದ್ರೋಹಿಗಳ ಫೇಸ್ಬುಕ್ ಪೇಜಾದ “ವೀರ ಕೇಸರಿ” ಯಲ್ಲಿ ಪೋಸ್ಟ್ ಮಾಡಲಾಗಿತ್ತು ! ಇಲ್ಲಿ ಮೂಡುವ ಪ್ರಶ್ನೆಯೇನೆಂದರೆ ಪೊಲೀಸ್ ಠಾಣೆಯೊಳಗೆ ತೆಗೆದಿರುವ ಫೋಟೋವನ್ನು ಹೊರಗಿನವರಿಗೆ ತಲುಪುವಂತೆ ಶೇರ್ ಮಾಡಿದ್ದು ಯಾರೆಂದು. ಇಲಾಖೆ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿದರೆ ಮಾತ್ರ ಈ ಕುರಿತು ಸ್ಪಷ್ಟ ಮಾಹಿತಿ ದೊರಕಬಹುದಾಗಿದೆ.
ಸಾರ್ವಜನಿಕರಿಗೆ ಉತ್ತರ ಸಿಗದ ಪ್ರಶ್ನೆಗಳು
ಪೊಲೀಸರು ಪರ್ವೀಝ್ ಹಾಗೂ ಅನುಷಾರನ್ನು ಬಂಧಿಸಲು ಇದ್ದ ಕಾರಣಗಳೇನು ? ಅವರನ್ನು ಬಂಧಿಸಲು ಪೊಲೀಸರಿಗೆ ದೂರು ಕೊಟ್ಟವರಾರು? ಎಂಟು ಮಂದಿ ಪೊಲೀಸರು ಮೂರು ಲಾಟಿ ಪುಡಿಯಾಗುವಂತೆ ಹೊಡೆಯಲು ಪರ್ವೀಝ್ ಮಾಡಿದ್ದ ಅಪರಾಧವೇನು? ಪರ್ವೀಝ್ ರನ್ನು ಠಾಣೆಯೊಳಗೆ ಅಕ್ರಮವಾಗಿ ಬಂಧಿಸಿಟ್ಟ ಘಟನೆಯನ್ನು ಸಬ್ ಇನ್ಸ್’ಪೆಕ್ಟರ್ ಗೆ ತಿಳಿಸದಿರಲು ಕಾರಣವೇನು? ಕೇವಲ ಒಂದು ಟವೆಲ್ ನಲ್ಲಿ ಠಾಣೆಯಲ್ಲಿ ಕೂಡಿ ಹಾಕಿಡಲು ಪರ್ವೀಝ್ ಮಾಡಿರುವ ಘೋರ ಅಪರಾಧವೇನು? ಪೊಲೀಸ್ ಠಾಣೆಯೊಳಗೆ ಸಾರ್ವಜನಿಕರೂ ಬಂದು ಹಲ್ಲೆ ನಡೆಸಲು ಅನುಮತಿ ಕೊಟ್ಟವರಾರು? ಈ ಎಲ್ಲಾ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಇಲಾಖೆಯೇ ಇದಕ್ಕೆ ಉತ್ತರ ನೀಡಬೇಕಾಗಿದೆ. ರಾಜ್ಯದ ಗೃಹ ಇಲಾಖೆ ಈ ಘಟನೆಯ ಕುರಿತು ಶೀಘ್ರವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕಾಗಿದೆ. ಹಾಗಿದ್ದಲ್ಲಿ ಮಾತ್ರವೇ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮೇಲೆ ಭರವಸೆ ಮೂಡಲು ಸಾಧ್ಯ.
