ವರದಿಗಾರ (ಜ.1): ರಾಜ್ಯದಾದ್ಯಂತ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಸ್ವತಃ ಪಕ್ಷದ ಯಾವ ನಾಯಕರೂ ಸರಿಯಾಗಿ ಭಾಗವಹಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗೆ ದೂರು ನೀಡಿದ್ದಾರೆ.
ಆದಿತ್ಯವಾರ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ನಡೆದ ರಾಜ್ಯ ಪ್ರಮುಖರ ಸಮಿತಿ ಸಭೆಯಲ್ಲಿ ಯಡಿಯೂರಪ್ಪ ತನ್ನ ದುಃಖವನ್ನು ವ್ಯಕ್ತಪಡಿಸಿದ್ದು, ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಪರಿವರ್ತನಾ ಯಾತ್ರೆಯಲ್ಲಿ ಎಲ್ಲಾ ನಾಯಕರೂ ಒಗ್ಗಟ್ಟು ಪ್ರದರ್ಶಿಸದೆ ಇರುವುದರಿಂದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ತನ್ನ ದೂರಿನಲ್ಲಿ ಯಡಿಯೂರಪ್ಪ ಉಲ್ಲೇಖಿಸಿದ್ದಾರೆ.
‘ಪರಿವರ್ತನಾ ಯಾತ್ರೆಯಲ್ಲಿ ಎಲ್ಲಾ ನಾಯಕರೂ ತಪ್ಪದೆ ಭಾಗವಹಿಬೇಕು ಮತ್ತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಅಮಿತ್ ಷಾ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
‘ನಾನು ಪರಿವರ್ತನಾ ಯಾತ್ರೆ ಕುರಿತು ವರದಿ ತರಿಸಿಕೊಂಡಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಹೇಳಿ ರಾಜ್ಯ ನಾಯಕರನ್ನು ಅಮಿತ್ ಷಾ ಸಂತೋಷ ಪಡಿಸಿದ್ದಾರೆ. ‘ಎಲ್ಲರೂ ಜತೆಗೂಡಿ ಕೆಲಸ ಮಾಡಿದರೆ ಇನ್ನಷ್ಟು ಪರಿಣಾಮಕಾರಿ ಆಗಲಿದೆ’ ಎಂದೂ ಸೂಚನೆ ನೀಡಿದ್ದಾರೆ.
