ವರದಿಗಾರ (ಡಿ.30): ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿರುವ ಅನಂತ್ ಕುಮಾರ್ ಹೆಗಡೆ ಅವರಿಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಹಲವು ಬಾರಿ ಸೂಚನೆ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅವರು ಶಿವಮೊಗ್ಗದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮಾತಿನಲ್ಲಿ ಸಂಯಮ ವಹಿಸಿ ಎಂದು ಅನಂತ್ ಕುಮಾರ್ ಹೆಗಡೆಗೆ ಎಚ್ಚರಿಕೆ ನೀಡಿದ್ದಾರೆ.
ನಾನೂ ಸೇರಿದಂತೆ ಎಲ್ಲರೂ ಮಾತನಾಡುವಾಗ ಎಚ್ಚರ ವಹಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೂ ಕಡಿವಾಣ ಬೇಕಿದೆ ಎಂದು ಹೇಳಿದ್ದಾರೆ.
ಮಹದಾಯಿ ವಿಚಾರದಲ್ಲಿ ಮೋದಿ ಅವರ ವಿರುದ್ಧ ಟೀಕೆ ಮಾಡುವ ಕಾಂಗ್ರೆಸ್ ಮುಖಂಡರು, ಮನಮೋಹನ್ ಸಿಂಗ್ 10 ವರ್ಷ ಪ್ರಧಾನಿಯಾಗಿದ್ದಾಗ ಏಕೆ ಮೌನವಾಗಿದ್ದರು? ಎಂದು ಪ್ರಶ್ನಿಸಿದ ಯಡಿಯೂರಪ್ಪ, ಇದೇ ಸಿದ್ದರಾಮಯ್ಯ ಎಂಟು ತಿಂಗಳ ಹಿಂದೆ ನ್ಯಾಯ ಮಂಡಳಿಗೆ ತೀರ್ಪು ಬರುವವರೆಗೂ ಕಾಯತ್ತೇವೆ ಎಂದು ಏಕಪಕ್ಷೀಯವಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಗೋವಾ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ತಮ್ಮ ಪಕ್ಷದ ನಾಯಕರ ಜತೆ ಮಾತನಾಡಲಿ ಎಂದಿದ್ದಾರೆ.
