ವರದಿಗಾರ (ಡಿ 29 ) : ‘ಹ್ಯೂಮನ್ಸ್ ಆಫ್ ಹಿಂದುತ್ವ’ ಎಂಬ ಫೇಸ್ಬುಕ್ ಪೇಜ್ ಬಲಪಂಥೀಯ ವಿಚಾರಧಾರೆಗಳನ್ನು ಬಹಳ ಕಟುವಾಗಿ ತನ್ನ ಪೇಜಿನಲ್ಲಿ ವಿಮರ್ಶಿಸುವ ಪೋಸ್ಟ್ ಗಳಿಗೆ ಹೆಸರು ವಾಸಿಯಾಗಿತ್ತು. ಆದರೆ ಅದರ ಅಡ್ಮಿನ್ ಗಳಿಗೆ ಬಲಪಂಥೀಯ ಕಟ್ಟರ್ ವಾದಿಗಳಿಂದ ಬಂದಿರುವ ಬೆದರಿಕೆಗಳಿಂದಾಗಿ ಗುರುವಾರ ಫೇಸ್ಬುಕ್ಕನ್ನೇ ತೊರೆಯುವ ಕುರಿತು ತನ್ನ ವೆಬ್ ಸೈಟಿನಲ್ಲಿ ತಿಳಿಸಲಾಗಿದೆ
ಈ ಫೇಸ್ಬುಕ್ ಪೇಜ್ ಪ್ರತಿ ಬಾರಿ ಬಲಪಂಥೀಯರ ನಡೆಗಳ ವಿರುದ್ಧ ಹಾಕಲಾಗುತ್ತಿದ್ದ ವಿಡಂಬನಾತ್ಮಕ ಪೋಸ್ಟ್ ಗಳಿಗೆ ಪ್ರಸಿದ್ಧಿಯಾಗಿತ್ತು. ಬಲಪಂಥೀಯರ ಮೂಲಭೂತವಾದ, ಪ್ರಚಲಿತ ವಿವಾದಗಳು, ಜಾತಿ ಪದ್ಧತಿ, ನೈತಿಕ ಪೋಲಿಸ್ ಗಿರಿ, ಕ್ರಿಮಿನಲ್ ಗೋ ರಕ್ಷಕರ ಅಟ್ಟಹಾಸ, ಇತ್ಯಾದಿಗಳ ಕುರಿತು ಪೋಸ್ಟ್ ಹಾಕಲಾಗುತ್ತಿತ್ತು. ಅದರ ಅಡ್ಮಿನ್ ವೆಬ್ ಸೈಟಿನಲ್ಲಿ ಹಾಕಿರುವಂತೆ ನನಗೆ ಬರುತ್ತಿರುವ ಹತ್ಯಾ ಬೆದರಿಕೆಗಳಿಂದಾಗಿ ನಾನು ಫೇಸ್ಬುಕ್ಕನ್ನು ತೊರೆಯುತ್ತಿರುವುದಾಗಿ ಹೇಳಲಾಗಿದೆ.
ವೆಬ್ ಸೈಟಿನಲ್ಲಿ, “ನಾನು ನನ್ನ ಸ್ವ ಇಚ್ಛೆಯಂತೆ ಫೇಸ್ಬುಕ್ಕನ್ನು ತೊರೆಯುತ್ತಿದ್ದೇನೆ. ನನ್ನನ್ನು ಯಾರೂ ನಿಷೇಧಿಸಿಲ್ಲ ಅಥವಾ ನಿಷೇಧಿಸುವಂತೆ ಯಾರೂ ನನ್ನ ವಿರುದ್ಧ ಸಾಮೂಹಿಕ ಅಭಿಯಾನವೂ ಕೈಗೊಂಡಿಲ್ಲ. ಆದರೆ ಇತ್ತೀಚೆಗೆ ನನಗೆ ಬಂದಿರುವ ಕೊಲೆ ಬೆದರಿಕೆಯನ್ನು ನಾನು ಲಘುವಾಗಿ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ನಾನು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ವಾಸಿಸುತ್ತಿದ್ದೇನೆ. ನಾನೊಂದು ಮಧ್ಯಮ ವರ್ಗದ ಕುಟುಂಬದಿಂದ ಬಂದವನಾಗಿದ್ದೇನೆ. ಬಂದವನಾಗಿದ್ದೇನೆ.ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ನನಗೆ ಯಾವುದೇ ಪೊಲೀಸ್ ಸಂಬಂಧವೂ ಇಲ್ಲ. ನಾನು ಪತ್ರಕರ್ತೆ ಗೌರಿ ಲಂಕೇಶ್ ಅಥವಾ ಅಫ್ರಾಝುಲ್ ರೀತಿಯಲ್ಲಿ ನನ್ನ ಜೀವನವನ್ನು ಕೊನೆಗೊಳಿಸಲು ಬಯಸುತ್ತಿಲ್ಲ. ನನಗೆ ನನ್ನ ಸುರಕ್ಷೆಗಿಂತಲೂ ನನ್ನ ಕುಟುಂಬದ ಭದ್ರತೆಯೇ ಮುಖ್ಯವಾಗಿದೆ. ನನಗೆ ಬೆದರಿಸಿದವರು ತಿಳಿದುಕೊಳ್ಳಲಿ, ನೀವು ಜಯಿಸಿದ್ದೀರಿ ಹಾಗೂ ನಮ್ಮನ್ನು ಬಿಟ್ಟುಬಿಡಿ. ನಾನು ಶೀಘ್ರವೇ ಫೇಸ್ಬುಕ್ ಪೇಜನ್ನು ಅಳಿಸಿ ಹಾಕುವೆನು. ಆದಷ್ಟು ಬೇಗ ವೆಬ್ ಸೈಟನ್ನೂ ಅಳಿಸಲಿದ್ದೇನೆ. ಡೆವೀಡ್ ಹಾಗೂ ಗೋಲಿಯಾಥ್ ನಡುವಿನ ಕಾಳಗದಲ್ಲಿ ಗೆದ್ದಿರುವ ಹಿಂದುತ್ವ ಶಕ್ತಿಗಳಿಗೆ ಅಭಿನಂದನೆಗಳು. ಕಳೆದ ಎಂಟು ತಿಂಗಳಿನಿಂದ ನನ್ನೊಂದಿಗೆ ಸಹಕರಿಸಿರುವ ನನ್ನೆಲ್ಲಾ ಮಿತ್ರರಿಗೆ ಹೊಸ ವರ್ಷದ ಶುಭಾಶಯಗಳು. ನಿಮ್ಮ ಅಮೂಲ್ಯ ಸಮಯಕ್ಕಾಗಿ ಕೃತಜ್ಞತೆಗಳನ್ನು ಹೇಳುತ್ತಾ ವಿದಾಯ ಕೋರುತ್ತಿದ್ದೇನ” ಎಂದು ಬರೆಯಲಾಗಿದೆ’
ಈ ಫೇಸ್ಬುಕ್ ಪೇಜಿನ ಅಡ್ಮಿನ್ ಈ ರೀತಿ ಪೇಜನ್ನು ತೊರೆಯುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಕಳೆದ ಸಪ್ಟಂಬರ್ ನಲ್ಲಿ ಕೂಡಾ ನಾನು ಫೇಸ್ಬುಕ್ಕನ್ನು ತೊರೆಯುತ್ತಿರುವುದಾಗಿ ಹೇಳಿದ್ದ ಅಡ್ಮಿನ್, ‘ನನ್ನ ತಲೆಯೊಳಗೆ ಬುಲೆಟ್ ತೂರಿ ಹೋಗುವಷ್ಟು ಧೈರ್ಯವಿಲ್ಲ’ ಎಂದು ಬರೆದಿದ್ದನು. ಆದರೆ ಹಲವಾರು ಓದುಗರಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆಗಳಿಂದಾಗಿ ಪೇಜನ್ನು ತೊರೆಯುವ ನಿರ್ಧಾರದಿಂದ ದೂರವುಳಿದಿದ್ದರು.
“ನನಗೆ ಲೆಕ್ಕವಿಲ್ಲದಷ್ಟು ಕೊಲೆ ಬೆದರಿಕೆಗಳು ಬಂದಿವೆ. ನನ್ನ ಕುಟುಂಬದ ವಿರುದ್ಧ ಬಂದಿರುವ ಹಲವು ರೀತಿಯ ಬೈಗುಳಗಳನ್ನು ಸಹಿಸಲು ಇನ್ನು ನನ್ನಿಂದ ಸಾಧ್ಯವಿಲ್ಲ. ಕೆಲವರು ನನ್ನ ವಿರುದ್ಧ ಕೇಸು ದಾಖಲಿಸುವ, ಕೋರ್ಟಿಗೆಳೆಯುವ ಬೆದರಿಕೆಯನ್ನೂ ಹಾಕುತ್ತಿದ್ದರು. ಇದೆಲ್ಲವೂ ಕೇವಲ ‘ಹಿಂದುತ್ವ’ ದ (ಹಿಂದೂಯಿಸಂ ಅಲ್ಲ) ವಿರುದ್ಧ ವಿಡಂಬನಾತ್ಮಕವಾಗಿ ಬರೆಯುವ ಈ ಪೇಜಿಗೋಸ್ಕರವಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹ್ಯೂಮನ್ಸ್ ಆಫ್ ಹಿಂದುತ್ವದ ಜಾಲ ತಾಣವಾದ ‘ಸತ್ಯನಾಶ್.ಕಾಂ’ನಲ್ಲಿ ಬಾಬರಿ ಮಸೀದಿ ಒಡೆದ 1992ರಿಂದ, ರಾಮ ಮಂದಿರ ನಿರ್ಮಾಣ ಮಾಡುತ್ತೇವೆಂದು ಅಶ್ವಾಸನೆ ಕೊಟ್ಟ ದಿನದಿಂದ ಲೆಕ್ಕ ಹಾಕಿ ಪ್ರತಿ ವರುಷ, ತಿಂಗಳು, ವಾರ, ದಿನ, ಗಂಟೆ, ನಿಮಿಷಗಳು ಹಾಗೂ ಸೆಕೆಂಡುಗಳನ್ನೆಣಿಸುವ ದೃಶ್ಯಗಳು ಇದೆ. ಈ ವೆಬ್ ಸೈಟನ್ನು ಕೂಡಾ ನಿಲ್ಲಿಸುತ್ತೇನೆಂದು ಅಡ್ಮಿನ್ ಉಲ್ಲೇಖಿಸಿದ್ದಾರೆ
