ಮಂಗಳೂರು : ಭಾರತದಲ್ಲಿ ಮೋದಿ ಆಡಳಿತಕ್ಕೆ ಬಂದ ನಂತರ 31 ಮುಸ್ಲಿಮರು ಮತ್ತು 8 ಮಂದಿ ದಲಿತರು ನಕಲಿ ಗೋ ರಕ್ಷಕರ ಗುಂಪು ಹಿಂಸೆಗೆ ಬಲಿಯಾಗಿದ್ದಾರೆ. ಇಲ್ಲಿ ದನಗಳ ಜೀವಕ್ಕಿರುವ ಬೆಲೆ ಜನರಿಗಿಲ್ಲದಂತಾಗಿರುವುದು ನಮ್ಮ ದುರಂತ ಎಂದು SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು. ಅವರು ಗುರುಪುರ ಕೈಕಂಬದಲ್ಲಿ ನಿನ್ನೆ ನಡೆದ SDPI ಯ ರಾಷ್ಟ್ರೀಯ ಅಭಿಯಾನವಾದ “ಗುಂಪು ಹಿಂಸೆಯನ್ನು ಪ್ರತಿರೋಧಿಸೋಣ” ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ನಡೆದ ಕಾರ್ಯಕ್ರಮದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ದನಗಳಿಗೆ ಆಂಬ್ಯುಲನ್ಸ್ ವ್ಯವಸ್ಥೆ ಮಾಡುವವರು ಪುಟ್ಟ ಕಂದಮ್ಮಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡದೆ ಅವರ ಮಾರಣಹೋಮಕ್ಕೆ ಕಾರಣರಾಗಿರುವುದು ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದವರು ಇದೇ ಸಂದರ್ಭದಲ್ಲಿ ನುಡಿದರು.
ಕಾರ್ಯಕ್ರಮದ ಮೊದಲು ಕ್ಷೇತ್ರದ ವಿವಿಧ ಕಡೆಗಳಿಂದ ಕಾರ್ಯಕರ್ತರು ರಾಲಿಯ ಮೂಲಕ ಕೈಕಂಬಕ್ಕೆ ಬಂದಿದ್ದರು. ಐಕ್ಯಗಾನದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಎಂ ಅಥಾವುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಡುಪಿಯ ಕ್ರೈಸ್ತ ಧರ್ಮಗುರುಗಳೂ ಮತ್ತು ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತರಾದಂತಹಾ ರೆ. ಫಾ ವಿಲಿಯಂ ಮಾರ್ಟಿಝ್, ಮುಸ್ಲಿಂ ಧರ್ಮಗುರುಗಳು ಮತ್ತು ಇಮಾಮ್ ಕೌನ್ಸಿಲ್’ನ ರಾಜ್ಯ ಕಾರ್ಯದರ್ಶಿಯಾದ ಜಾಫರ್ ಸಾದಿಕ್ ಫೈಝಿ, ಪಿ ಎಫ್ ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, SDPI ಮುಲ್ಕಿ ಮೂಡಬಿದ್ರೆ ಕ್ಷೇತ್ರಾಧ್ಯಕ್ಷ ಜಮಾಲ್ ಜೋಕಟ್ಟೆ, SDPI ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಮಜೀದ್ ಖಾನ್, ಅಬೂಬಕ್ಕರ್ ಪುತ್ತ ಮತ್ತು ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಹಾಜರಿದ್ದರು. SDPI ನ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶೋಭ, ಕುಸುಮ, ಉಮೈರತ್, ನಝೀರ್ ಬಜ್ಪೆ, ಪರ್ವೀಝ್ ಜೋಕಟ್ಟೆ ಮತ್ತು ಸಲಾಂ ಸೂರಿಂಜೆ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮಧ್ಯೆ ಬಿರುಸಾಗಿ ಮಳೆ ಸುರಿದರೂ ಕಾರ್ಯಕರ್ತರು ಕುಳಿತ ಸ್ಥಳದಿಂದ ಕದಲದೇ ಇದ್ದುದು ವೇದಿಕೆಯಲ್ಲಿದ್ದ ಗಣ್ಯರಿಗೆ ಇನ್ನಷ್ಟು ಹುರುಪಿನಿಂದ ಭಾಷಣ ಮಾಡಲು ಸಹಕಾರಿಯಾಯಿತು. ಗಣ್ಯರು ಸಂಘಟಕರು ಪ್ರಾಯೋಜಿಸಿದ್ದ ವಿಶೇಷ ಕೊಡೆಯಡಿಯಲ್ಲಿ ಭಾಷಣ ಮಾಡಿದರು.
