ವರದಿಗಾರ (ಡಿ.28): ಗೋಸಂರಕ್ಷಣೆ ಮತ್ತು ಗೋಹತ್ಯೆ ನಿಷೇಧದ ಪರವಾಗಿರುವ ಸಹಿ ಸಂಗ್ರಹವು ವಿದ್ಯಾಕೇಂದ್ರದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ದ.ಕ. ಜಿಲ್ಲಾ ಸಮಿತಿಯು ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಶಾಲಾ ಕಾಲೇಜುಗಳಲ್ಲಿ ಒಂದು ಧರ್ಮವನ್ನು ಭಾವನಾತ್ಮಕವಾಗಿ ಪ್ರೇರೇಪಿಸುವ ಮತ್ತು ಇನ್ನೊಂದು ಧರ್ಮವನ್ನು ಕೆರಳಿಸುವ ಗೋ ರಕ್ಷಣೆ ಮತ್ತು ಗೋಹತ್ಯೆ ನಿಷೇಧ ಪರವಾಗಿ ವಿದ್ಯಾರ್ಥಿಗಳಿಗೆ ಅರಿವು ನೀಡದೆ ಸಹಿಗಳನ್ನು ಪಡೆಯುತ್ತಿರುವುದು ಕಂಡುಬಂದಿದೆ. ಉದಾಹರಣೆಗೆ ಪುತ್ತೂರು ತಾಲೂಕಿನ ಮಾಡನ್ನೂರು ಗ್ರಾಮದ ಪೆರ್ನಾಜೆ ಸೀತರಾಘವ ಪ್ರೌಢ ಶಾಲೆ , ಮುಡಿಪು ಕೂರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯು ಈ ತರದ ಘಟನೆಗಳು ನಡೆದಿದ್ದು ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.ಇದು ಸರಕಾರಿ ಶಾಲೆಗಳಲ್ಲಿ ಮತ್ತು ಅನುದಾನಿತ ಶಾಲೆಗಳಲ್ಲಿಯೂ ನಡೆಯುತ್ತಿದೆ ಎಂದು ಎಸ್.ಡಿ.ಪಿ.ಐ ತನ್ನ ಮನವಿಯಲ್ಲಿ ಉಲ್ಲೇಖಿಸಿದೆ.
ಈ ಘಟನೆಯಿಂದಾಗಿ ವಿದ್ಯಾಕೇಂದ್ರದೊಳಗಿನ ಶಾಂತಿಯ ವಾತಾವರಣವು ಕದಡುತ್ತಿದ್ದು, ಹಲವು ವಿದ್ಯಾರ್ಥಿಗಳು ಇದಕ್ಕೆ ವಿರೋಧಿಸಿರುತ್ತಾರೆ. ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳ ಸಂಗಮವಾಗಿರುವ ವಿದ್ಯಾಕೇಂದ್ರದೊಳಗೆ ಈ ರೀತಿಯ ರಾಜಕೀಯ ಪ್ರೇರಿತ, ಕೋಮು ದ್ರುವೀಕರಣಗೊಳಿಸುವ ವಿಚಾರಗಳನ್ನು ಬಳಸುತ್ತಿರುವುದು ಶಿಕ್ಷಣ ನೀತಿಗೆ ವಿರುದ್ದವಾಗಿದೆ ಎಂದು ಎಸ್.ಡಿ.ಪಿ.ಐ. ಅಭಿಪ್ರಾಯಪಟ್ಟಿದೆ.
ಕೆಲವು ಕಡೆ ಈ ಘಟನೆಯಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದವು ಶಾಮಿಲಾಗಿದ್ದು ಕಂಡು ಬಂದಿದ್ದು, ದೂರು ಕೂಡ ದಾಖಲಾಗಿದೆ ಎಂದು ಆರೋಪಿಸಲಾಗಿದೆ. ಇಂತಹ ಘಟನೆಗಳು ಮುಂದುವರಿದಲ್ಲಿ ಕೇವಲ ವಿದ್ಯಾಕೇಂದ್ರದ ಒಳಗಡೆಯಲ್ಲದೆ ಸಮಾಜದಲ್ಲಿಯೂ ಅಶಾಂತಿಯ ವಾತಾವರಣ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಸ್.ಡಿ.ಪಿ.ಐ ಕಳವಳ ವ್ಯಕ್ತಪಡಿಸಿದೆ.
ಆದುದರಿಂದ ಶಿಕ್ಷಣ ಇಲಾಖೆ ಕೂಡಲೇ ಕಾರ್ಯ ಪ್ರವೃತ್ತರಾಗಿ ಈ ರೀತಿಯ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿ ಅಶಾಂತಿ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಎಲ್ಲಾ ಶಿಕ್ಷಣ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯ ಅಧಿಕೃತ ಸುತ್ತೋಲೆಯ ಮೂಲಕ ಈ ರೀತಿಯ ಘಟನೆಗಳು ಮರುಕಳಿಸದಂತೆ ಆದೇಶ ನೀಡಬೇಕೆಂದು ಮನವಿಯಲ್ಲಿ ಅಧಿಕಾರಿಯನ್ನು ಒತ್ತಾಯಿಸಲಾಗಿದೆ.
ಈ ರೀತಿಯ ಘಟನೆಗಳು ಮುಂದುವರಿದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಎಸ್.ಡಿ.ಪಿ.ಐ ಎಚ್ಚರಿಕೆಯನ್ನು ನೀಡಿದೆ.
