ವರದಿಗಾರ (ಡಿ.28): ಪಂಜಾಬ್-ಹರಿಯಾಣ ಹೈಕೋರ್ಟ್ ನ ಸುಮಾರು 470 ವಕೀಲರು ಜಸ್ಟೀಸ್ ಲೋಯಾ ಅಸಹಜ ಸಾವಿನ ತನೆಖೆಯನ್ನು ಸಿಬಿಐ, ವಿಶೇಷ ತನಿಖಾ ತಂಡ ಅಥವಾ ತನಿಖಾ ಆಯೋಗವೊಂದಕ್ಕೆ ಸಲ್ಲಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ದೀಪಕ್ ಮಿಶ್ರಾ ರಿಗೆ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಲೋಯಾ 2014ರಲ್ಲಿ, ಪ್ರಕರಣದ ಮುಕ್ತಾಯ ಹಂತದಲ್ಲಿ ಸಾವಿಗೀಡಾಗಿದ್ದರು. ಅವರ ಅಸಹಜ ಸಾವಿನ ಬಗ್ಗೆ ಕುಟುಂಬವು ಹಲವಾರು ಸಂಶಯಗಳನ್ನು ವ್ಯಕ್ತಪಡಿಸಿತ್ತು.
ಈ ಹಿನ್ನಲೆಯಲ್ಲಿ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು, ಇತರ ನ್ಯಾಯಾಧೀಶರು ಹಾಗೂ ಬಾಂಬೇ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ ವಕೀಲರು, ಲೋಯಾ ಸಾವಿನಲ್ಲಿ ಅಸಹಜತೆ ಕಂಡುಬರುವುದರಿಂದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೊಳಪಡುಸುವಂತೆ ಕೋರಿದ್ದಾರೆ.
“ಹೈ ಪ್ರೊಫೈಲ್ ಕೇಸುಗಳಲ್ಲಿ ತೀರ್ಪು ನೀಡುವ ನ್ಯಾಯಾಧೀಶರ ಬದುಕು ಸುರಕ್ಷಿತವಲ್ಲ ಹಾಗೂ ಅವರು ಒತ್ತಡ ಹಾಗೂ ಪ್ರಭಾವದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗಿದ್ದಲ್ಲಿ ನ್ಯಾಯ ವ್ಯವಸ್ಥೆಯೇ ಅಪಾಯದಲ್ಲಿದ್ದಂತೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
