ವರದಿಗಾರ (ಡಿ 27 ) : ‘ನಾವು ಸಂವಿಧಾನವನ್ನು ಬದಲಿಸಲಿಕ್ಕಾಗಿಯೇ ಬಂದವರು’ ಹಾಗೂ ‘ಜಾತ್ಯತೀತತೆ’ಯನ್ನು ಬೆಂಬಲಿಸುವವರು ಅಪ್ಪ ಅಮ್ಮನ ಗುರುತು ಪರಿಚಯವಿಲ್ಲದವರು’ ಎಂಬ ಅವಿವೇಕತನದ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಸಂಸದ ಅನಂತಕುಮಾರರ ವಿರುದ್ಧದ ಆಕ್ರೋಶ ಇಂದು ಸಂಸತ್ ನಲ್ಲಿ ಪ್ರತಿಧ್ವನಿಸಿದ್ದು, ಇಡೀ ರಾಜ್ಯದಾದ್ಯಂತ ಪ್ರತಿಭಟನೆಗಳು, ರಸ್ತೆ ತಡೆಗಳು ನಡೆಯುತ್ತಿದೆ. ಒಂದೆಡೆ ತಮ್ಮ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಡ ಬಲವಾಗುತ್ತಿರುವ ನಡುವೆಯೇ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಮಾಜಿಕ ಕಾರ್ಯಕರ್ತರೋರ್ವರು ಸಂಸದ ಅನಂತಕುಮಾರರ ವಿರುದ್ಧ ನೀಡಿರುವ ದೂರಿನಲ್ಲಿ, ಅನಂತಕುಮಾರರ ತಂದೆಯ ಹೆಸರು ಬರೆಯುವ ಜಾಗದಲ್ಲಿ “ಗೊತ್ತಿಲ್ಲ” ಎಂದು ಬರೆದು, ದೂರು ನೀಡಿ ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಗರ ತಾಲೂಕಿನ ಸಾಮಾಜಿಕ ಕಾರ್ಯಕರ್ತರಾದ ಶಿವಾನಂದ ಕುಗ್ವೆ ಎಂಬವರು, ಸಾಗರ ಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರತಿಯಲ್ಲಿ ಇದು ಕಂಡು ಬಂದಿದೆ. ಅನಂತಕುಮಾರರ ಹೆಸರು ಬರೆದು, ಅವರ ತಂದೆಯ ಹೆಸರು ಬರೆಯುವಲ್ಲಿ ‘ಗೊತ್ತಿಲ್ಲ’ ಎಂದು ಬರೆಯಲಾಗಿದ್ದು, ನಂತರ ‘ಸಂಸತ್ ಸದಸ್ಯರು, ಉತ್ತರ ಕನ್ನಡ ಜಿಲ್ಲೆ, ಕಾರವಾರ’ ಎಂದು ಬರೆಯಲಾಗಿದೆ.
ಒಟ್ಟಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಲಂಗು ಲಗಾಮಿಲ್ಲದ ಕೋಮು ಪ್ರಚೋದಕ ಭಾಷಣಗಳು ಹಾಗೂ ಸಂವಿಧಾನ ವಿರೋಧಿ ಹೇಳಿಕೆಗಳಿಂದಾಗಿ ರಾಜ್ಯದ ಜನರ ತೀವ್ರ ಆಕ್ರೋಶಕ್ಕೆ ತುತ್ತಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವರಾಗಿರುವ ಅನಂತಕುಮಾರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿರುವ ಬಿಜೆಪಿ ಪಕ್ಷ ಹಾಗೂ ಕೇಂದ್ರ ಸರಕಾರದ ವಿರುದ್ಧ ಜನರ ಆಕ್ರೋಶವೂ ಹೆಚ್ಚುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಸಾಗರ ತಾಲೂಕಿನ ಕುಗ್ವೆ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಅನಂತಕುಮಾರ್ ಅವರ ಶೈಲಿಯಲ್ಲಿಯೇ ಜನರು ಪ್ರತಿಭಟಿಸಿದ್ದು ವಿಶಿಷ್ಟವಾಗಿದೆ
