ವರದಿಗಾರ (ಡಿ.27): ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಖ್ಯಾತ ಸಾಹಿತಿ ದೇವನೂರ್ ಮಹಾದೇವ ಮಂಗಳವಾರ ಬರೆದ ಬಹಿರಂಗ ಪತ್ರದಲ್ಲಿ, ‘ದ್ವೇಷವೇ ನಿಮ್ಮ ತಂದೆ, ಅಸಹನೆಯೇ ನಿಮ್ಮ ತಾಯಿ. ಭ್ರಮೆಯೇ ನಿಮ್ಮ ಮೂಲ ಪುರುಷ. ಮಿಥ್ಯ ಎಂಬುದೇ ನಿಮ್ಮ ಜ್ಞಾನ ಸಂಪತ್ತು’ ಎಂದು ಟಾಂಗ್ ನೀಡಿದ್ದಾರೆ.
‘ಅಪ್ಪ ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ನೀವು ಲೇವಡಿ ಮಾಡಿದ್ದೀರಿ. ಆದ್ದರಿಂದ ನಿಮ್ಮ ಅಪ್ಪ ಅಮ್ಮನ ಗುರುತನ್ನು ನಾವು ತಿಳಿಸಿಕೊಟ್ಟಿದ್ದೇವೆ’ ಎಂದು ಅವರು ಮಹಾದೇವ್ ಹೇಳಿದ್ದಾರೆ.
‘ಹುಟ್ಟಿದಾಗ ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯೇ. ಆದರೆ ಅವನು ಮಾಡುವ ಕೆಲಸಗಳಿಂದ ಮನುಷ್ಯನಾಗಿ ಬದಲಾಗುತ್ತಾನೆ ಎಂದಿದ್ದೀರಿ. ಆದರೆ ನಿಮ್ಮ ವಿಷಯದಲ್ಲಿ ಇದು ಯಾಕೋ ಉಲ್ಟಾ ಅನಿಸುತ್ತದೆ’ ಎಂದಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾದ ಎ.ಬಿ.ವಾಜಪೇಯಿ ಈಗ ಸಕ್ರಿಯರಾಗಿಲ್ಲ. ಆದ್ದರಿಂದ ಬಿಜೆಪಿ ಹಾಗೂ ಎನ್ಡಿಎ ಹಾಲಿ ನಾಯಕರು ಪ್ರಜ್ಞಾಹೀನ ಪುಂಡುಪೋಕರಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
‘ಅಕಸ್ಮಾತ್ ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಅವರಿಗೆ ಮೂರು ನಾಮ ಹಾಕಿ, ವೈಷ್ಣವರನ್ನಾಗಿಸಿ ಶಂಕು–ಜಾಗಟೆ ಹಿಡಿಸುತ್ತಾರೆ. ಅನಂತ್ ಕುಮಾರ್ ಹೆಗಡೆ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಬಿಜೆಪಿಯ ರಾಜಕಾರಣ ನೋಡಿದರೆ ಇದು ಸಂಭವಿಸಲೂಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ನಿಮ್ಮಂಥವರು ಕರ್ನಾಟಕವನ್ನು ಸ್ಮಶಾನ ಮಾಡಿಬಿಡುತ್ತೀರಿ ಎಂಬ ಭೀತಿ ಉಂಟಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
