ವರದಿಗಾರ (ಡಿ.27): ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಇತ್ತೀಚೆಗೆ ಕೊಪ್ಪಳದಲ್ಲಿ ನೀಡಿರುವ ‘ಸಂವಿಧಾನವನ್ನು ಬದಲಿಸಬೇಕು. ಅದಕ್ಕಾಗಿಯೇ ನಾವು ಬಂದಿರುವುದು’ ಹೇಳಿಕೆಯ ವಿರುದ್ಧ ಕೆಲವು ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದು, ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸೇರಿದ್ದ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ, ಸಚಿವ ಹೆಗಡೆ ಸಮಾರಂಭವೊಂದರಲ್ಲಿ ನೀಡಿದ್ದ ಹೇಳಿಕೆ ವಿರುದ್ಧ ಕೆಲವು ನಾಯಕರು ಕಿಡಿ ಕಾರಿದ್ದಾರೆ. ಹೆಗಡೆ ಅವರು ಪದೇ ಪದೇ ಬಾಯಿಗೆ ಬಂದಂತೆ ಮಾತನಾಡುತ್ತಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ನಾಯಕರು ದೂರಿದ್ದಾಗಿ ಮೂಲಗಳು ಹೇಳಿವೆ.
ಹೆಗಡೆ ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಬರೀ ನಮ್ಮ ವಿಚಾರ ಒಪ್ಪುವ ಜನರಿರುವುದಿಲ್ಲ. ಬೇರೆ ರೀತಿಯಲ್ಲೂ ಆಲೋಚನೆ ಮಾಡುವ ಜನರಿರುತ್ತಾರೆ. ರಾಜ್ಯ ಸದ್ಯ ಗೊಂದಲದಲ್ಲಿದ್ದು ಇಂತಹ ಗಿಮಿಕ್ಗಳನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಬೇಡ್ಕರ್ ಬಗ್ಗೆ ಅಪಾರ ಗೌರವವಿದ್ದು, ಸಂವಿಧಾನ ಶಿಲ್ಪಿಯ 125ನೇ ಜಯಂತಿ ಆಚರಣೆ ಸಮಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ವಿವಾದಾತ್ಮಕ ಹೇಳಿಕೆ ಕೊಡುವ ಮೊದಲು ಇದನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ಅನಂತ್ ಕುಮಾರ್ ಹೆಗಡೆಗೆ ತಾಕೀತು ಮಾಡುವಂತೆ ಮನವಿ ಮಾಡಿದ್ದಾರೆ.
ಪ್ರಮುಖರ ಸಮಿತಿ ಸಭೆ ಆರಂಭವಾಗುವ ಮೊದಲು ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಅವರು, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡಿ ಸಂವಿಧಾನ ಬದಲಾವಣೆ ಕುರಿತು ಹೆಗಡೆ ನೀಡಿರುವ ಹೇಳಿಕೆ ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಸಚಿವರ ವರ್ತನೆಯಿಂದ ಈ ಸಮುದಾಯಗಳು ಅಪಮಾನಕ್ಕೊಳಗಾಗುತ್ತಿವೆ. ಅವರು ಹೀಗೆ ಮುಂದುವರಿದರೆ ಬಿಜೆಪಿ ಬೆಂಬಲಿಸುತ್ತಿರುವ ತಳ ಸಮುದಾಯಗಳು ದೂರ ಸರಿಯುತ್ತವೆ ಎಂಬ ವಾಸ್ತವವನ್ನು ಮುಂದಿಟ್ಟು ಎಚ್ಚರಿಸಿದ್ದಾರೆ.
ಹಿರಿಯ ನಾಯಕರ ದೂರುಗಳನ್ನು ಕೇಳಿಸಿಕೊಂಡ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಪಕ್ಷಕ್ಕೆ ಹಾನಿಯಾಗುವ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಹೆಗಡೆ ಅವರ ವರ್ತನೆಯನ್ನು ವರಿಷ್ಠರ ಗಮನಕ್ಕೆ ತರುವುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇಷ್ಟೆಲ್ಲಾ ಎಚ್ಚರಿಕೆ ನೀಡಿಯೂ ಸಚಿವರು ತಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರ ಎಂಬುವುದೇ ಯಕ್ಷ ಪ್ರಶ್ನೆ.
