ವರದಿಗಾರ (ಡಿ.27): ಅನಂತ್ ಕುಮಾರ್ ಹೆಗಡೆಯ ಪೂರ್ವಿಕರು ಸಂಸ್ಕೃತ ಬಳಸುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಅವರು ಇದೀಗ ಈ ರೀತಿಯ ಅವಿವೇಕದ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೆ, ಸಂವಿಧಾನ ವಿರೋಧ ಮಾಡುವ ವ್ಯಕ್ತಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದೇಕೆ ಎಂದು ಚಿಂತಕ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಪ್ರಶ್ನಿಸಿದ್ದಾರೆ.
ಮಂಗಳವಾರ ಬೆಂಗಳೂರಿನ ಫ್ರೀಡಂಪಾರ್ಕ್ ಸಮೀಪದ ಕುರುಬರ ಸಂಘದ ಕನಕ ಸಭಾಂಗಣದಲ್ಲಿ ಸಮ ಸಮಾಜ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಸಂಘಪರಿವಾರ’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಶ್ರೀರಾಮನ ಹೆಸರಿನಲ್ಲಿ ಸಂಘ ಪರಿವಾರದವರು ವ್ಯಾಪಾರ ಮಾಡಲು ಮುಂದಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಶ್ರೀರಾಮಚಂದ್ರ ಇದ್ದ ಎನ್ನುವುದು ನಂಬಿಕೆ ಅಷ್ಟೆಯೇ ಹೊರತು ಪುರಾವೆ ಹುಡುಕಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅದನ್ನೇ ನಾನು ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ಸಭೆಯೊಂದರಲ್ಲಿ ಹೇಳಿದ್ದಕ್ಕೆ ಸಂಘಪರಿವಾರ ವಿವಾದವನ್ನಾಗಿ ಸೃಷ್ಟಿಸಿದ್ದರು ಎಂದು ಹೇಳಿದ್ದಾರೆ.
ಶ್ರೀರಾಮನ ಬಗ್ಗೆ ಮಾತನಾಡಿದರೆ ಸಂಘಪರಿವಾರದವರಿಗೆ ಸಿಟ್ಟು ಬರುತ್ತದೆ. ಆದರೆ, ನಮ್ಮ ನಾಯಕರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕು ಇವರಿಗಿದೆಯೇ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಜಾತ್ಯತೀತರಿಗೆ ಅಪ್ಪ-ಅಮ್ಮ ಯಾರು ಎಂದು ಕೇಳುತ್ತಾರೆ. ಹೆತ್ತ ತಾಯಿಯ ಮೇಲೆ ಗೌರವ ಇಲ್ಲದಿರುವವರು ಇಂತಹ ಪದಗಳನ್ನು ಬಳಕೆ ಮಾಡುತ್ತಾರೆ. ನಮಗೂ ಅವರಂತೆ ಭಾಷೆ ಬಳಕೆ ಮಾಡಲು ಬರುತ್ತದೆ. ಆದರೆ ಹೆಗಡೆ ಅವರಂತೆ ನಾವು ನೀಚರಲ್ಲ ನಮಗೆ ತಾಯಂದಿರ ಬಗ್ಗೆ ಗೌರವವಿದೆ ಎಂದು ಅನಂತ್ ಕುಮಾರ್ ಹೆಗಡೆ ಗೆ ತಿರುಗೇಟು ನೀಡಿದ್ದಾರೆ.
ದಲಿತ ಮುಖಂಡ ಮಾವಳ್ಳಿ ಶಂಕರ್, ಬಹುಸಂಖ್ಯಾತರಾದ ಅಹಿಂದ ಸಮುದಾಯಗಳು ಮೌನವಾಗಿರುವ ಕಾರಣದಿಂದಲೇ ಅನಂತ್ ಕುಮಾರ್ ಹೆಗಡೆ ಯಂತವರು ಸಿದ್ದರಾಮಯ್ಯ ಪಾಪದ ಪಿಂಡ, ಜಾತ್ಯತೀತರಿಗೆ ತಂದೆ ತಾಯಿ ಇಲ್ಲ ಎಂದು ಹೇಳುತ್ತಿದ್ದಾರೆ. ಯಾರೊಬ್ಬರಿಗೂ ಸಾಮಾಜಿಕ ನ್ಯಾಯದ ಮೇಲೆ ದಾಳಿ ಮಾಡುವ ಹಕ್ಕಿಲ್ಲ ಇಂತವರು ದೇಶವನ್ನು ಸಂಪೂರ್ಣ ಮಧ್ಯಕಾಲೀನ ಯುಗಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದು, ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಿಂದುತ್ವದ ಆಧಾರದ ಮೇಲೆ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದು, ದೇಶವನ್ನು ಸರ್ವನಾಶ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಂವಾದದಲ್ಲಿ ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್, ಸಮಾ ಸಮಾಜ ವೇದಿಕೆ ರಾಜ್ಯಾಧ್ಯಕ್ಷ ಸುಭಾಷ್, ವಕೀಲ ಅನಂತ ನಾಯ್ಕ್, ಹೋರಾಟಗಾರ ನರಸಿಂಹಮೂರ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
