ವರದಿಗಾರ (ಡಿ.27): ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ‘ಸಂವಿಧಾನ ಬದಲಿಸಲು ನಾವು ಬಂದಿರುವುದು’ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸಂವಿಧಾನ ಬದಲಿಸುವುದು ಜನಿವಾರ ಬದಲಿಸಿದಷ್ಟು ಸುಲಭವಲ್ಲ. ನಿಮಗೆ ತಾಕತ್ತಿದ್ದರೆ ಸಂಸತ್ತಿನಲ್ಲಿ ಮಂಡಿಸಿ ಎಂದು ಸವಾಲು ಹಾಕಿದ್ದಾರೆ.
ಅವರು ಮೈಸೂರಿನ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜಾತ್ಯಾತೀತರ ರಕ್ತದ ಬಗ್ಗೆ ಮಾತನಾಡುವ ಅನಂತ್ ಕುಮಾರ್ ಬಹುತ್ವದ ವಿರೋಧಿ ಎಂದು ಹೇಳಿದ್ದಾರೆ. ನಿಮ್ಮ ರಕ್ತದ ಬಗ್ಗೆ ನಮಗೆ ಸಂಶಯ ಮೂಡುತ್ತಿದೆ. ನಿಮ್ಮ ಕೊಳಕು ನಾಲಿಗೆ ನೀವು ಯಾರು ಎಂದು ತೋರಿಸುತ್ತಿದೆ ಎಂದು ಲೇವಡಿ ಮಾಡಿದರು.
ಪದೇ ಪದೇ ದೇಶದ್ರೋಹದ ಹೇಳಿಕೆಯನ್ನು ಕೊಟ್ಟು ದೇಶದ ಪ್ರಗತಿಗೆ ಕಂಟಕ ಪ್ರಾಯವಾದ ಇಂತವರ ವಿರುದ್ಧ ದೇಶದ್ರೋಹದ ಆಪಾದನೆಯಡಿ ಸೆಕ್ಷನ್ 124-ಎ, 153ರ ಅಡಿಯಲ್ಲಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚೋರನಹಳ್ಳಿ ಶಿವಣ್ಣ, ಎಸ್.ಡಿ.ಪಿ.ಐ ನ ಕೌಶನ್ ಬೇಗ್, ತುಂಬಲ ರಾಮಣ್ಣ , ಮುತ್ತುರಾಜು ಉಪಸ್ಥಿತರಿದ್ದರು.
