ವರದಿಗಾರ (ಡಿ.26): ಮಹದಾಯಿ ನದಿ ನೀರು ಬಿಕ್ಕಟ್ಟು ಅತ್ಯಂತ ಸೂಕ್ಷ್ಮವಾದ ವಿಷಯ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇದನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಿತ್ತು. ಆದರೆ ನೀವು ಪಕ್ಷಕ್ಕೆ ಹಿನ್ನಡೆಯಾಗುವಂತಹ ಕ್ರಮಗಳನ್ನು ಅನುಸರಿಸಿದ್ದೀರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದ ನಂತರ ಸಮಸ್ಯೆ ನಿಭಾಯಿಸುವಲ್ಲಿ ನೀವು ಸಂಪೂರ್ಣವಾಗಿ ವಿಫಲರಾಗಿದ್ದೀರಿ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿ ಮುಂದೆ ಕಳೆದ ನಾಲ್ಕು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಹೇಳಿದ್ದಾರೆ.
ನಾನು ಖುದ್ದು ದೆಹಲಿಗೆ ಬರುವಂತೆ ಮನೋಹರ್ ಪರಿಕ್ಕರ್ ಅವರ ಮನವೊಲಿಸಿದ್ದೆ. ಗೋವಾದಲ್ಲಿ ನಮ್ಮ ಪಕ್ಷ ಸಂಪೂರ್ಣವಾಗಿ ಬಹುಮತ ಪಡೆದಿಲ್ಲ. ಮಿತ್ರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದೇವೆ. ಪರಿಕ್ಕರ್ ಇದನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದಾರೆ. ನೀವು ಮಾತ್ರ ಪ್ರಮಾದಗಳನ್ನು ಮಾಡುತ್ತಲೇ ಇದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷಗಳು ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡು ನಮ್ಮ ವಿರುದ್ದ ಜನರನ್ನು ಪ್ರಚೋದನೆಗೆ ಎತ್ತಿಕಟ್ಟುತ್ತಿದ್ದಾರೆ. ಇದು ರಾಜ್ಯಾದ್ಯಂತ ತಪ್ಪು ಸಂದೇಶ ರವಾನೆಯಾಗಲು ಕಾರಣವಾಗುತ್ತದೆ. ಕೆಲವು ಸೂಕ್ಷ್ಮ ವಿಷಯಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದು ನಿಮಗೆ ಗೊತ್ತಿಲ್ಲ ಎಂದರೆ ಹಿರಿಯ ನಾಯಕರ ಸಲಹೆಗಳನ್ನು ಪಡೆಯಬೇಕು. ಎಲ್ಲದರಲ್ಲೂ ಅನುಭವ ಇರುವವರೇ ಈ ರೀತಿ ತಪ್ಪುಗಳನ್ನು ಮಾಡಿದರೆ ಹೇಗೆ ಎಂದು ದೂರವಾಣಿ ಮೂಲಕ ಪ್ರಶ್ನಿಸಿದ್ದಾರೆ.
ಪಕ್ಷಕ್ಕೆ ಉಂಟಾಗಿರುವ ಹಿನ್ನಡೆಯನ್ನು ಸರಿಪಡಿಸುವ ಹೊಣೆಗಾರಿಕೆ ನಿಮ್ಮದು. ನಾನು ಮತ್ತೊಮ್ಮೆ ಪರಿಕ್ಕರ್ ಅವರ ಮನವೊಲಿಸಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ಮಹದಾಯಿ ನದಿ ನೀರು ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಪರಿಹರಿಸಿಕೊಳ್ಳಲು ಪಕ್ಷ ಸಿದ್ದವಿದೆ ಎಂಬ ಸಂದೇಶವನ್ನು ಜನತೆಗೆ ತಿಳಿಸಬೇಕು. ಚುನಾವಣೆ ಸಂದರ್ಭದಲ್ಲಿ ಈ ರೀತಿ ತಪ್ಪುಗಳು ಆಗದಂತೆ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಸಲಹೆ ಮಾಡಿದ್ದಾರೆ. ವಿಶೇಷವಾಗಿ ಯಡಿಯೂರಪ್ಪನವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಶಾ, ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನೀವು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪ್ರತಿಪಕ್ಷಗಳು ಒಂದೊಂದು ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ನಮ್ಮನ್ನು ತುಳಿಯಲು ಯತ್ನಿಸುತ್ತವೆ. ಮುಂದಿನ ದಿನಗಳಲ್ಲಿ ಯಾವುದೇ ಹೇಳಿಕೆ ನೀಡುವ ಮೊದಲು ತುಸು ಆಲೋಚಿಸಬೇಕೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್, ಮುರುಳೀಧರ್ ರಾವ್, ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ಅವರು ಎಚ್ಚರಿಕೆಯ ಸಂದೇಶ ನೀಡಿರುವುದು ಮೂಲಗಳಿಂದ ತಿಳಿದು ಬಂದಿದೆ.
