ವರದಿಗಾರ (ಡಿ 26 ) : ಸಂಸ್ಕಾರವಂತ ಸಮಾಜವೇ ನಾಚುವಂತಹಾ ಘಟನೆಯೊಂದು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ ಮೀರತ್ ನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ರಾಜ್ಯ ಸರಕಾರದ ಅಧೀನದಲ್ಲಿರುವ ಲಾಲ ಲಜಪತ್ ರಾಯ್ ವೈದ್ಯಕಿಯ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಆಂಬ್ಯುಲನ್ಸ್’ನಲ್ಲಿ ಮದ್ಯದ ಬಾಟಲ್ ಗಳನ್ನು ಸರಬರಾಜು ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ರಷ್ಯಾದ ಬೆಲ್ಲಿ ಡ್ಯಾನ್ಸರ್’ಗಳಿಂದ ನೃತ್ಯ ಕಾರ್ಯಕ್ರಮವನ್ನೂ ನಡೆಸಲಾಗಿದೆ. ಕಾಲೇಜಿನ ಪ್ರಿನ್ಸಿಪಾಲ್ ಘಟನೆಯ ಕುರಿತು ಇಲಾಖಾ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಕಾಲೇಜಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಬೆಳ್ಳಿ ಹಬ್ಬದ ಸಂಭ್ರಮೋತ್ಸವ ಆಚರಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆಯೆನ್ನಲಾಗಿದ್ದು, 1992 ರ ಸಾಲಿನ ಹಳೆ ವಿದ್ಯಾರ್ಥಿಗಳಾದ ಉನ್ನತ ಮಟ್ಟದ ವೈದ್ಯರು ಈ ಸಂದರ್ಭದಲ್ಲಿ ಹಾಜರಿದ್ದರೆನ್ನಲಾಗಿದೆ. ಆಚರಣೆಯಲ್ಲಿ ಹೊರಗಿನಿಂದ ಆಂಬ್ಯುಲನ್ಸ್’ನಲ್ಲಿ ಮದ್ಯ ಸರಬರಾಜು ಮಾಡಲಾಗಿದ್ದು, ವೇದಿಕೆಯಲ್ಲಿ ರಷ್ಯನ್ ಬೆಲ್ಲಿ ಡ್ಯಾನ್ಸರ್’ಗಳಿಂದ ನೃತ್ಯವನ್ನೂ ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಿನ್ಸಿಪಾಲ್ ವಿನಯ್ ಅಗರ್ವಾಲ್ ರವರಲ್ಲಿ ಈ ಕುರಿತು ಪ್ರಶ್ನಿಸಿದಾಗ, ಸಂಜೆಯ ಬಳಿಕವಷ್ಟೇ ನನಗೆ ಘಟನೆಯ ಕುರಿತು ಮಾಹಿತಿ ಲಭ್ಯವಾಗಿದೆ. ಮದ್ಯ ಸರಬರಾಜು ಮಾಡಲು ಆಂಬ್ಯುಲನ್ಸನ್ನು ನಮ್ಮ ಕಾಲೇಜಿನಿಂದಲೇ ಪಡೆಯಲಾಗಿತ್ತೇ ಅಥವಾ ಇತರೆ ಯಾವುದಾದರೂ ಖಾಸಗಿ ಆಸ್ಪತ್ರೆಯಿಂದ ಬಾಡಿಗೆಗೆ ಪಡೆಯಲಾಗಿತ್ತೇ ಎನ್ನುವ ಕುರಿತು ಮಾಹಿತಿ ಲಭಿಸಿಲ್ಲ. ಆದರೂ ಇಲಾಖಾ ಮಟ್ಟದಲ್ಲಿ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ’ ಎಂದು ತಿಳಿಸಿದ್ದಾರೆ.
