ವರದಿಗಾರ (ಡಿ.26):ಬಿಜೆಪಿಯ ಸಂವಿಧಾನ ಬದಲಾವಣೆ ವಿಚಾರವು ‘ಹಿಡನ್ ಅಜೆಂಡಾ’ ವಾಗಿದ್ದು, ಇದು ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ದೊಡ್ಡ ಅಪಾಯ ತಂದೊಡ್ಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ದಾವಣಗೆರೆಯ ಬಾಪೂಜಿ ವಸತಿ ಗೃಹದಲ್ಲಿ ಸೋಮವಾರ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
‘ಸಂವಿಧಾನ ಬದಲಾಯಿಸುತ್ತೇವೆ ಎಂದಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಗ್ರಾಮ ಪಂಚಾಯತಿ ಸದಸ್ಯನಾಗಲೂ ನಾಲಾಯಕ್. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಕೈಜೋಡಿಬೇಕು’ ಎಂದುಕರೆ ನೀಡಿದ್ದಾರೆ.
‘ಬಿಜೆಪಿ ನಾಯಕರು ಯಥಾಸ್ಥಿತಿವಾದಿಗಳು. ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ಜೀವಂತವಾಗಿದ್ದರೆ ಸುಲಭವಾಗಿ ಶೋಷಣೆ ಮಾಡಬಹುದು ಎಂಬುದು ಅವರ ಲೆಕ್ಕಾಚಾರ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಕರೆ ನೀಡಿದ್ದಾರೆ.
‘ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಬಲವಾಗಿರುವುದು ಕರ್ನಾಟಕದಲ್ಲಿ. ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ರಾಜ್ಯದಲ್ಲಿ ಅಧಿಕಾರದ ರುಚಿ ಕಂಡಿರುವ ಬಿಜೆಪಿ ಹೇಗಾದರೂ ಮಾಡಿ ಮತ್ತೆ ಅಧಿಕಾರ ಪಡೆಯಲು ಯಾವ ಮಟ್ಟಕ್ಕಾದರೂ ಇಳಿಯಲಿದೆ. ಹಿಂದೆ, ಕೊಳ್ಳೆ ಹೊಡೆದ ಹಣವನ್ನು ಚುನಾವಣೆಗೆ ಬಳಸಿಕೊಳ್ಳಲಿದೆ’ ಎಂದು ಆರೋಪಿಸಿದರು.
‘ಸಿಬಿಐ, ಗುಪ್ತಚರ ಇಲಾಖೆ, ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗ ಬಿಜೆಪಿಯ ಕೈಯ್ಯಲ್ಲಿದೆ. ಈ ಬಗ್ಗೆ ಮುಖಂಡರು ಎಚ್ಚರದಿಂದ ಇರಬೇಕು. ಸ್ವಲ್ಪ ಮೈಮರೆತರೂ ಅಪಾಯ ಎದುರಾಗಲಿದೆ. ಮತ ಬ್ಯಾಂಕ್ ಭದ್ರಗೊಳಿಸುವತ್ತ ಗಮನಹರಿಸಬೇಕು. ಹೊಸ ಕಾರ್ಯಕರ್ತರನ್ನು ಸೆಳೆಯಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
