ಆತಂಕ ಸೃಷ್ಟಿಸಿದ ಅಸಹಿಷ್ಣುತೆ, ಪೊಲೀಸರ ಮಧ್ಯಪ್ರವೇಶ
ಮನೆಯಲ್ಲಿ ಗುಂಪಾಗಿ ನಮಾಝ್ ನಿರ್ವಹಿಸುವುದಿಲ್ಲವೆಂದು ಸ್ಥಳೀಯ ಮುಸ್ಲಿಮರಿಂದ ಮುಚ್ಚಳಿಕೆ ಪಡೆಯಲು ನಿರ್ಧರಿಸಿದ ಪೊಲೀಸರು!!
ವರದಿಗಾರ(25-12-2017): ಉತ್ತರ ಪ್ರದೇಶದ ಗಂಗೇಶ್ವರಿ ಪ್ರದೇಶದ ಅಮ್ರೋಹ ಎಂಬ ಹಿಂದೂ ಬಾಹುಳ್ಯವಿರುವ ಪ್ರದೇಶದಲ್ಲಿ ಮುಸ್ಲಿಮ್ ಮನೆಯೊಂದರಲ್ಲಿ ಗುಂಪಾಗಿ ನಮಾಝ್ ನಿರ್ವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರೊಂದಿಗೆ ಸಭೆ ನಡೆಸಿ ಆತಂಕವನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ. ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ವರದಿಯಾಗಿದೆ.
ಎಸ್ಸೈ ಕಿರಣ್ ಪಾಲ್ ಸಿಂಗ್ ಪ್ರಕಾರ, ಶನಿವಾರದಂದು ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ಝಾಕಿರ್ ಅಲಿ ಎಂಬವರ ಮನೆಯಲ್ಲಿ ‘ಅಕ್ರಮ ಮದ್ರಸಾ’ ನಡೆಯುತ್ತಿದೆ ಎಂದು ಮೌಖಿಕ ದೂರನ್ನು ನೀಡಿದ್ದರು.
ದೂರುದಾರನ ಪ್ರಕಾರ ಕಳೆದ ಕೆಲವು ದಿನಗಳಿಂದ ಕೆಲವು ಮುಸ್ಲಿಮರು ಝಾಕಿರ್ ಅಲಿಯ ಮನೆಯಲ್ಲಿ ನಮಾಝ್ ನಿರ್ವಹಿಸಲು ಬರುತ್ತಿದ್ದು, ಹೆಚ್ಚಿನವರು ಪಕ್ಕದ ಊರಿನವರಾಗಿದ್ದರು.
ಸ್ಥಳೀಯ ಮುಸ್ಲಿಮರು ಝಾಕಿರ್ ಅಲಿಯ ಮನೆಯಲ್ಲಿ ಗುಂಪಾಗಿ ನಮಾಝ್ ನಿರ್ವಹಿಸದಿರಲು ಒಪ್ಪಿದ್ದಾರೆ, ಇನ್ನು ಮುಂದೆ ಗುಂಪು ನಮಾಝ್ ನಿರ್ವಹಿಸಿದಲ್ಲಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ಸ್ಥಳೀಯ 15 ಮುಸ್ಲಿಮರಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
