ವರದಿಗಾರ (ಡಿ.25): ಬಿಜಾಪುರ -ವಿಜಯಪುರದ 9ನೇ ತರಗತಿಯ ಶಾಲಾ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಸಂಬಂಧಿ ಮಹಿಳೆಯೊಬ್ಬರು ಸಹಕರಿಸಿದ್ದರು ಎಂಬುದು ಸಿಐಡಿ ಪೊಲೀಸರ ತನಿಖೆಯಿಂದ ವರದಿಯಾಗಿದೆ.
ದುಷ್ಕೃತ್ಯಕ್ಕಾಗಿ ಆರೋಪಿಗಳಿಗೆ ತನ್ನ ಮನೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದು ಬಯಲಾಗಿದೆ. ಶೀಘ್ರದಲ್ಲೇ ಆಕೆಯನ್ನು ಬಂಧಿಸುವುದಾಗಿ ಸಿಐಡಿ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2-3 ಹೆಸರುಗಳಿಂದ ಈ ಮಹಿಳೆ ಗುರುತಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ಬಾಲಕಿಯು ಅತ್ಯಾಚಾರದಿಂದಲೇ ಮೃತಪಟ್ಟಿದ್ದಾಗಿ ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಕೂಡ, ಬಾಲಕಿಯು ಅತ್ಯಾಚಾರದಿಂದ ಮೃತಪಟ್ಟಿರುವ ಅಂಶವನ್ನೇ ಬಿಂಬಿಸಿದೆ. ಹಿಸ್ಟೊಪೆಥಾಲಾಜಿಕಲ್ ವರದಿ ನಮ್ಮ ಕೈ ಸೇರಿಲ್ಲ. ಬಾಲಕಿಯ ದೇಹದಿಂದ ಹೊರತೆಗೆದಿರುವ ಅಂಗಾಂಶಗಳ ಮಾದರಿಯನ್ನು ವೈದ್ಯರು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕವಷ್ಟೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದನ್ನು ನಿಖರವಾಗಿ ಹೇಳಬಹುದು ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಅದಲ್ಲದೆ ಕೆಲವೇ ದಿನಗಳಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಉಡುಪಿ ಚಲೋ ಇದರ ರೂವಾರಿ ಬಿ.ಆರ್. ಬಾಸ್ಕರ್ ಪ್ರಸಾದ್ ತನ್ನ ಫೇಸ್ಬುಕ್ ನ ಮುಖಪುಟದಲ್ಲಿ ಹೇಳಿದ್ದಲ್ಲದೆ ಸಾರ್ವಜನಿಕರು ಕೈ ಜೋಡಿಸುವಂತೆ ಕರೆ ನೀಡಿದ್ದಾರೆ.
