ರಾಷ್ಟ್ರೀಯ ಸುದ್ದಿ

ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದ ನ್ಯಾಯಮೂರ್ತಿ ಲೋಯಾ ತಂಗಿದ್ದ ಅತಿಥಿ ಗೃಹದ ದಾಖಲೆಗಳನ್ನು ತಿರುಚಲಾಗಿದೆ : ಹಿರಿಯ ವಕೀಲರ ಆರೋಪ

ವರದಿಗಾರ (ಡಿ 25 ) : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಮುಖ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬೃಜ್ ಗೋಪಾಲ್ ಹರಿಕಿಶನ್ ಲೋಯಾರವರು ಸಂಶಯಾಸ್ಪದ ಸಾವಿಗೆ ಮುನ್ನ ತಾವು ತಂಗಿದ್ದ ನಾಗ್ಪುರದ ಸರಕಾರಿ ವಿಐಪಿ ಅತಿಥಿ ಗೃಹದ ವಾಸ್ತವ್ಯ ನೋಂದಣಿ ಪುಸ್ತಕಗಳನ್ನು ತಿರುಚಲಾಗಿದೆ ಎಂಬ ಗಂಭೀರ ಆರೋಪವನ್ನು ವಕೀಲ ಮಿಲಿಂದ್ ಪಖಲೆಯವರು ಹೊರಿಸಿದ್ದಾರೆ.

ಲೋಯಾರವರು ಈ ಸರಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯವಿದ್ದ ನಮೂದಿನ ಒಂದೆರಡು ಉಲ್ಲೇಖಗಳ ಮೊದಲು ಮಿಲಿಂದ್ ಪಖಲೆಯವರು ತಂಗಿದ್ದರ ಕುರಿತಾಗಿರುವ ದಾಖಲೆಗಳು ನಮೂದಾಗಿದ್ದವು. ಈಗ ಅವುಗಳನ್ನು ತಿರುಚಲಾಗಿರುವ ಕುರಿತು ಮಿಲಿಂದ್ ಪಖಲೆಯವರು ಪೊಲೀಸ್ ದೂರು ದಾಖಲಿಸಿದ್ದಾರೆ.

ನ್ಯಾಯಾಧೀಶರವರು 2014 ರ ನವಂಬರ್ 30 ಹಾಗೂ ಡಿಸಂಬರ್ 1 ರ ನಡುವಿನ ರಾತ್ರಿಯಲ್ಲಿ ಈ ಸರಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬಕ್ಕೆ ತಿಳಿಸಲಾಗಿತ್ತು. ಆದರೆ ನಂತರ ಅವರ ಕುಟುಂಬದ ಹಲವು ಸದಸ್ಯರು ಹಾಗೂ ಅವರ ಸಹವರ್ತಿಗಳು, ‘ದಿ ಕಾರವನ್’ ಪತ್ರಿಕೆಗೆ ನೀಡಿದ ಹೇಳಿಕೆಗಳಲ್ಲಿ, “ಲೋಯಾ ಸಾವು ಸಂಶಯಾಸ್ಪದವಾಗಿದೆ, ಅಮಿತ್ ಶಾ ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದಲ್ಲಿ ಆರೋಪಿಗಳಿಗೆ ಅನುಕೂಲಿಸುವ ತೀರ್ಪು ನೀಡುವಂತೆ ಲೋಯಾ ಅವರ ಮೇಲೆ ಒತ್ತಡ ಹೇರಲಾಗಿತ್ತು. ಒಂದು ಹಂತದಲ್ಲಿ ಅವರಿಗೆ 100 ಕೋಟಿ ರೂಪಾಯಿಗಳ ಆಮಿಷವನ್ನೂ ಒಡ್ಡಲಾಗಿತ್ತು. ಆದರೆ ಇವೆಲ್ಲವನ್ನೂ ಲೋಯಾರವರು ನಿರಾಕರಿಸಿದ್ದರು. ಈ ಎಲ್ಲಾ ಆಮಿಷಗಳ ಹಿಂದೆ ಅಂದಿನ ಬಾಂಬೇ ಹೈಕೋರ್ಟಿನ ಮುಖ್ಯ ನಾಯಯಮೂರ್ತಿಯಾಗಿದ್ದ ಮೋಹಿತ್ ಶಾ ಸೇರಿದಂತೆ ಹಲವು ಪ್ರಭಾವೀ ವ್ಯಕ್ತಿಗಳು ಇದ್ದರು” ಎಂಬ ಆರೋಪವನ್ನು ಮಾಡಿದ್ದರು. ಒಟ್ಟಿನಲ್ಲಿ ಇವರ ಹೇಳಿಕೆಯ ಪ್ರಕಾರ ಅದೊಂದು ಸಹಜ ಸಾವಲ್ಲ, ಬದಲು ಕೊಲೆಯೆಂದು ಶಂಕೆ ವ್ಯಕ್ತಪಡಿಸಿದ್ದರು.

ಇದೀಗ ವಕೀಲ ಮಿಲಿಂದ್ ಪಖಲೆಯವರ ಈ ಗಂಭೀರ ಆರೋಪ ಪ್ರಕರಣವನ್ನು ಮತ್ತೆ ಜೀವಂತವಿರಿಸಿದೆ ಮಾತ್ರವಲ್ಲ ಲೋಯಾರವರ ಕುಟುಂಬ ವರ್ಗದವರ ಹಲವು ಆರೋಪಗಳನ್ನು ಪುಷ್ಟೀಕರಿಸುವಂತಿದೆ. ಮಿಲಿಂದ್ ಪಖಲೆ 2006 ರಲ್ಲಿ ಖೈರ್ಲಾಂಜಿಯಲ್ಲಿ ನಡೆದ ದಲಿತರ ಸಾಮೂಹಿಕ ಹತ್ಯಾಕಾಂಡದ ತನಿಖೆಗಾಗಿ ನೇಮಿಸಲಾಗಿದ್ದ ಖೈರ್ಲಾಂಜಿ ಕ್ರಿಯಾ ಸಮಿತಿಯ ಸಂಯೋಜಕರಾಗಿದ್ದರು.

2014 ರಲ್ಲಿ ನಾನು ಅತಿಥಿ ಗೃಹಕ್ಕೆ ಆಗಮಿಸಿದ ಹಾಗೂ ತೆರಳಿದ ಕುರಿತಾಗಿರುವ ಉಲ್ಲೇಖಗಳನ್ನು ನನ್ನ ಸ್ವಂತ ಕೈಬರಹದಲ್ಲಿ ಬರೆದಿದ್ದೆ. ಆದರೆ ಈಗ ನಾನು ಅತಿಥಿ ಗೃಹಕ್ಕೆ ಆಗಮಿಸಿದ್ದ ಹಾಗೂ ತೆರಳಿದ ದಿನಾಂಕಗಳ ಉಲ್ಲೇಖಗಳನ್ನು ಬೇರೆಯವರ ಕೈಬರಹದಲ್ಲಿ ಬರೆಯಲಾಗಿದೆ. ಆದರೆ ಇತರೆ ದಾಖಲೆಗಳು ನನ್ನ ಕೈಬರಹದಲ್ಲೇ ಇದೆ ಎಂದು ಮಿಲಿಂದ್ ಪಖಲೆ ತಿಳಿಸಿದ್ದಾರೆ. ಈ ಕುರಿತು ನಾಗ್ಪುರದ ಸದಾರ್ ಪೊಲೀಸ್ ಠಾಣೆಗೆ ನೀಡೀರುವ ದೂರಿನಲ್ಲಿ ಮಿಲಿಂದ್ ಪಖಲೆಯವರು, ‘2014 ನವಂಬರ್ 30 ರಂದು  ಸರಕಾರಿ ದಾಖಲೆಯಲ್ಲಿದ್ದ ಕೆಲವು ಉಲ್ಲೇಖಗಳನ್ನು ತಿರುಚಿದ್ದಾರೆ. ಅದರಲ್ಲಿನ ಕೆಲವು ಮಾಹಿತಿಗಳನ್ನು ಅಳಿಸಿ ಹಾಕುವ ಪ್ರಯತ್ನದಲ್ಲಿ ದಾಖಲೆ ಪುಸ್ತಕವನ್ನು ಹಾಳುಗೆಡವಿ, ಈಗ ನಕಲಿ ನೋಂದಣಿ ಪುಸ್ತಕವನ್ನು ಬಳಸಲಾಗುತ್ತಿದೆ’ ಎಂದು ತನ್ನ ದೂರಿನಲ್ಲಿ ತಿಳಿಸಿದ್ದಾರೆ ಎಂದು caravanmagazine.in ವರದಿ ಮಾಡಿದೆ. ದೂರಿನ ಪ್ರತಿಯನ್ನು ನಾಗ್ಪುರದ ಅತಿಥಿ ಗೃಹದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಅಲ್ಲಿನ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಗೂ ಕಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಇಂಜಿನಿಯರ್, ಈಗ ವಿಧಾನಸಭೆಯ ಕಲಾಪ ನಡೆಯುತ್ತಿರುವುದರಿಂದ, ಕ್ರಿಸ್ ಮಸ್ ಕಳೆದು ಈ ಕುರಿತು ಗಮನ ಹರಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

‘ದಿ ಕಾರವನ್’ ಪತ್ರಿಕೆ 2017 ರ ಡಿಸಂಬರ್ 21 ರ ವರದಿಯಲ್ಲಿ, ನ್ಯಾಯಮೂರ್ತಿ ಲೋಯಾರವರು ತಂಗಿದ್ದ ತನ್ನ ಅಂತಿಮ ರಾತ್ರಿಯ ಅತಿಥಿ ಗೃಹದ ದಾಖಲೆ ಪುಸ್ತಕದಲ್ಲಿ ಕೆಲವೊಂದು ಹಸ್ತಕ್ಷೇಪ ನಡೆದ ಸುಳಿವಿನ ಬಗ್ಗೆ ವರದಿ ಮಾಡಿದೆ. ನಾಗ್ಪುರ ಮೂಲದ ವಕೀಲ ಸೂರಜ್ ಲೊಲಗೆ ಎಂಬವರು ಮಾಹಿತಿ ಹಕ್ಕಿನ ಮೂಲಕ ಪಡೆದ ಉತ್ತರಗಳಲ್ಲಿ ಈ ಮಾಹಿತಿಗಳು ಇದೆ. ನ್ಯಾ. ಲೋಯಾಗೆ ಸಂಬಂಧಿಸಿದ ವಾಸ್ತವ್ಯ ದಾಖಲೆಗಳ ಉಲ್ಲೇಖದ ಬಳಿಕದ ಮೂರು ಉಲ್ಲೇಖಗಳನ್ನು ಖಾಲಿ ಬಿಡಲಾಗಿದೆ. ಅಲ್ಲದೆ ಈ ಉಲ್ಲೇಖಗಳಿಗಿಂತಲೂ ಮೊದಲಿನ ವಿವರಗಳಲ್ಲಿ 2017 ರ ದಿನಾಂಕ ನಮೂದಿಸಲಾಗಿದೆ. ಅತಿಥಿಗಳ ವಿವರ ಬರೆಯುವ ಸ್ಥಳದಲ್ಲಿ  ಬಾಬಾ ಸಾಹೇಬ್ ಅಂಬೇಡ್ಕರ್ ಮಿಲಿಂದ್ ಎಂದು ಬರೆಯಲಾಗಿದೆ. ಇಲ್ಲಿ ಹೆಸರನ್ನು ಉದ್ದೇಶಪೂರ್ವಕವಾಗಿ ಅಸ್ಪಷ್ಟವಾಗಿ ಬರೆದಿರುವುದು ಸ್ಪಷ್ಟವಾಗಿದೆ ಎಂದು ಮಾಹಿತಿ ಹಕ್ಕು ಅರ್ಜಿಯಿಂದ ತಿಳಿದು ಬರುತ್ತದೆ ಎಂದು ‘ಕಾರವನ್’ ಪತ್ರಿಕೆ ತಿಳಿಸಿದೆ. ಈ ಕುರಿತು ವಕೀಲ ಮಿಲಿಂದ್ ಪಖಲೆಯವರೂ ಕೂಡಾ ಸಂಶಯ ವ್ಯಕ್ತಪಡಿಸಿದ್ದಾರೆ. 2017 ರ ಉಲ್ಲೇಖಗಳ ಬಳಿಕ 2014 ರ ಉಲ್ಲೇಖಗಳು ಅದು ಹೇಗೆ ತಾನೇ ಬರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group