ವರದಿಗಾರ (ಡಿ.23): ಮಾನ್ಯ ಸಂಸದ ಪ್ರತಾಪ್ ಸಿಂಹರೇ,ನಿಮ್ಮ ಹೆಸರಿನಲ್ಲಿಯೇ ಸಿಂಹವಿದೆ. ಹಾಗಾದರೆ, ನೀವು ಮನುಷ್ಯರೋ, ಪ್ರಾಣಿಯೋ? ನೀವು ಮಾತನಾಡುತ್ತಿರೋ, ಘರ್ಜಿಸುತ್ತಿರೋ? ಊಟ ಮಾಡುತ್ತಿರೋ, ಬೇಟೆ ಆಡುತ್ತೀರೋ? ಎಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಕರಾವಳಿ ಉತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕರಾವಳಿಯ ಕೂಸು. ನನ್ನ ತಂದೆ ಪುತ್ತೂರಿನವರು. ತಾಯಿ ಗದಗಿನವರು. ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಜನರು, ನನ್ನನ್ನು ನಮ್ಮವ ಎಂದು ಹೇಳುತ್ತಿದ್ದಾರೆ. ಆದರೂ ನನ್ನ ಮಣ್ಣಿನಲ್ಲಿ ನಿಂತು, ನಾನು ಕರಾವಳಿಯ ಮಗ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದಿದ್ದಾರೆ.
ಸಂಸದ ಪ್ರತಾಪ್ ಸಿಂಹ ನನ್ನನ್ನು ಪ್ರಶ್ನಿಸಿದ್ದಾರೆ. ಅವರಿಗೆ ನನ್ನ ಮಣ್ಣಿನಲ್ಲಿ, ನನ್ನ ವೇದಿಕೆಯಲ್ಲಿ ನಿಂತು ಉತ್ತರ ಕೊಡುತ್ತೇನೆ ಎಂದ ಅವರು, ನನ್ನ ಹೆಸರು ಪ್ರಕಾಶ್ ರೈ. ನನ್ನ ಸಿನಿಮಾ ಹೆಸರು ಪ್ರಕಾಶ್ ರಾಜ್. ನನ್ನನ್ನು ಪ್ರಶ್ನಿಸುವ ನೀವು, ನಟರಾದ ರಾಜ್ಕುಮಾರ್, ರಜನೀಕಾಂತ್, ವಿಷ್ಣುವರ್ಧನ್ ಅವರನ್ನೂ ಪ್ರಶ್ನಿಸುತ್ತೀರಾ? ಎಂದು ಕೇಳಿದ್ದಾರೆ. ನಾನು ಪ್ರಕಾಶ್ ರೈ ಆಗಿರಲಿ, ಪ್ರಕಾಶ್ ರಾಜ್ ಆಗಿರಲಿ, ಇದರಿಂದ ನಿಮಗೇನು ಸಮಸ್ಯೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಾವಿಗೆ ಕಂಬನಿ ಮಿಡಿಯಬೇಕು. ಅದನ್ನು ಬಿಟ್ಟು ಸಾವಿನಲ್ಲೂ ರಾಜಕಾರಣ ಮಾಡುವ ಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಇವರಿಗೆ ಜನರ ಸಂಭ್ರಮ ಅರ್ಥವಾಗುತ್ತಿಲ್ಲ. ಯುವಜನಾಂಗದ ನಿರುದ್ಯೋಗ ಸಮಸ್ಯೆ, ರೈತರ ಬವಣೆಗಳು ಕಾಣುತ್ತಿಲ್ಲ. ಪುಟ್ಟ ಮಕ್ಕಳ ಕಣ್ಣಿನಲ್ಲಿರುವ ಭಯದ ವಾತಾವರಣ ಅರ್ಥವಾಗುತ್ತಿಲ್ಲ ಎಂದು ಖೇಧ ವ್ಯಕ್ತಪಡಿಸಿದ್ದಾರೆ.
ನನಗಿಂತ ಕನ್ನಡಿಗರು ನೀವಲ್ಲ. ನಿಮಗೆ ಅವಾಚ್ಯ ಭಾಷೆ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ನಾವು ನಿಮ್ಮಂತೆಯೇ ಮಾತನಾಡಬಹುದು. ಆದರೆ, ನಮಗೆ ಆ ಭಾಷೆ ಬೇಕಿಲ್ಲ ಎಂದು ಹೇಳಿದರು. ಭಯವಿಲ್ಲದ, ಪ್ರಶ್ನೆ ಮಾಡುವ ವಾತಾವರಣ ನಿರ್ಮಾಣವಾಗಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಅದಕ್ಕೆ ಇಂತಹ ಉತ್ಸವಗಳು ವೇದಿಕೆಯಾಗಬೇಕೆಂದು ಕರೆ ನೀಡಿದ್ದಾರೆ.
