ವರದಿಗಾರ (ಡಿ.23): ಕೋಮು ದಳ್ಳುರಿಗೆ ತತ್ತರಿಸಿರುವ ಹೊನ್ನಾವರದಲ್ಲಿ ಬೆಂಕಿಗೆ ತುಪ್ಪ ಸುರಿಯುವ ಯತ್ನ ಮಾಡಿದ ಚಿಕ್ಕಮಂಗಳೂರು-ಉಡುಪಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಕೋಮುಗಲಭೆ ಘಟನೆಗೆ ಸಂಬಂಧಿಸಿದಂತೆ ವದಂತಿಗಳನ್ನು ಹರಡಿದ್ದಕ್ಕಾಗಿ ಉತ್ತರ ಕನ್ನಡದ ಪೊಲೀಸರು ಸಂಸದೆ ಶೋಭಾ ಕರಂದ್ಲಾಜೆಯ ವಿರುದ್ಧ ಐಪಿಸಿ ಸೆಕ್ಷನ್ 153 ಹಾಗೂ 505 ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಹೊನ್ನಾವರದಲ್ಲಿ ಇತ್ತೀಚೆಗೆ ‘ಹಿಂದೂ ಬಾಲಕಿಯ ಅತ್ಯಾಚಾರಕ್ಕೆ ಯತ್ನ, ಗಂಭೀರ ಹಲ್ಲೆ’ ಎಂಬ ವದಂತಿಯು ಹರಡಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯಲು ಸಾಮಾಜಿಕ ಜಾಲತಾಣದಾದ್ಯಂತ ಪ್ರಯತ್ನಿಸಲಾಗಿತ್ತು. ಕ್ಷಣದಲ್ಲೇ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ, “ಜಿಹಾದಿಗಳು 9ನೆಯ ತರಗತಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಲು ಹಾಗೂ ಕೊಲೆಗೈಯ್ಯಲು ಪ್ರಯತ್ನಿಸಿದ್ದಾರೆ, ಈ ಬಗ್ಗೆ ಸರಕಾರ ಏಕೆ ಮೌನವಾಗಿದೆ? ಸಿಎಂ ಸಿದ್ದರಾಮಯ್ಯರೆ ತಾವೆಲ್ಲಿದ್ದೀರಿ?” ಎಂದು ಟ್ವೀಟ್ ಮೂಲಕ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದರು.
ಆದರೆ, ಪೊಲೀಸ್ ತನಿಖೆಯ ನಂತರ ಬಾಲಕಿಯನ್ನು ಯಾರೂ ಅಪಹರಿಸಲು ಪ್ರಯತ್ನಿಸಿಲ್ಲ ಎನ್ನುವುದು ತಿಳಿದು ಬಂದಿತ್ತು ಮತ್ತು ಈ ಬಗ್ಗೆ ಅಧಿಕಾರಿಗಳು ಪತ್ರಿಕಾಗೋಷ್ಠಿ ಮೂಲಕ ಸತ್ಯಾಂಶವನ್ನು ಹೇಳಿದ್ದರು. ವಿದ್ಯಾರ್ಥಿಯ ಸ್ವಜಾತಿಯ ಯುವಕನೋರ್ವನ ಕಿರುಕುಳ ಸಹಿಸಲಾರದೆ ಹಾಗೂ ಶಾಲಾ ಪರೀಕ್ಷೆಯ ಭಯದಿಂದ ವಿದ್ಯಾರ್ಥಿನಿ ‘ನಿಂಬೆ ಗಿಡದ ಮುಳ್ಳಿನಿಂದ ಕೈಗೆ ಗಾಯ ಮಾಡಿಕೊಂಡಿದ್ದಳು’. ಇದರಿಂದ ಕುಮಟಾ ಉದ್ವಿಗ್ನತೆಗೆ ಕಾರಣವಾಗಿತ್ತು. ಜನರ ಅಭಿವೃದ್ಧಿಗಾಗಿ ಮಾತನಾಡಬೇಕಿದ್ದ ಜನಪ್ರತಿನಿಧಿಗಳೇ ಸಮಾಜದಲ್ಲಿ ಅಶಾಂತಿ ಸೃಷ್ಠಿಸಲು ಪ್ರಯತ್ನಿಸುತ್ತಿರುವುದು ಖೇಧಕರ.
