ವರದಿಗಾರ (22.12.2017) : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಗಿಮಿಕ್ ಗೆ ಮರುಳಾಗಲು ನಾವೇನು ಗುಜರಾತಿಗರಲ್ಲ. ಈ ಹೊತ್ತಿನಲ್ಲಿ ಅವರು ಕೊಡುವ ಹುಸಿ ಭರವಸೆಗಳನ್ನು ನಂಬಿ ಕೂರಲು ಸಾಧ್ಯವಿಲ್ಲ ಎಂದು ಕಳಸಾ-ಬಂಡೂರಿ ಪಕ್ಷಾತೀತ ರೈತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ ಕಿಡಿ ಕಾರಿದ್ದಾರೆ. ನವಲಗುಂದ ಬಂದ್ ನಿಮಿತ್ತ ಮೆರವಣಿಗೆ ನಡೆಸಿ, ರೈತ ಭವನದಲ್ಲಿ ಸಮಾವೇಶಗೊಂಡ ರೈತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರೈತರ ಹೋರಾಟವನ್ನು ಬಿಜೆಪಿ ನಿರಂತರವಾಗಿ ನಿರ್ಲಕ್ಷಿಸುತ್ತಲೇ ಬಂದಿದೆ. ಚುನಾವಣೆ ಹತ್ತಿರ ಬಂದಿರುವುದರಿಂದ ಈಗ ರೈತ ಪರ ನಕಲಿ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ ಹಾಗೂ ಇವರಿಗೆ ಮಹದಾಯಿಯ ನೆನಪಾಗಿದೆ. ಆದರೆ ನಾವಿಲ್ಲಿ ಎರಡೂ ವರೆ ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ್ದೇವೆ. ಬೂಟಿನೇಟು ತಿಂದಿದ್ದೇವೆ, ಜೈಲಿನಲ್ಲಿದ್ದು ಬಂದಿದ್ದೇವೆ. ಇಲ್ಲಿನ ರೈತರು ಕಣ್ಣೀರಿನಿಂದ ಕೈ ತೊಳೆಯುತ್ತಿದ್ದಾಗ ಕಣ್ಣೆತ್ತಿ ನೋಡದ ಬಿಜೆಪಿಗರು ಈಗ ಚುನಾವಣೆಯ ಸಮಯದಲ್ಲಿ ಸಭೆ ಕರೆದು ನಮ್ಮನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅಮಿತ್ ಶಾರವರ ಮಾತಿಗೆ ಮರುಳಾಗಲು ನಾವೇನು ಗುಜರಾತಿಗರಲ್ಲ ಎಂಬುದುದನ್ನು ನೆನಪಿಡಬೇಕಾಗಿದೆ ಎಂದವರು ಖಾರವಾಗಿ ತಿಳಿಸಿದ್ದಾರೆ. ನಿಮ್ಮ ನಕಲಿ ಅಶ್ವಾಸನೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಲೋಕನಾಥ್ ತಿಳಿಸಿದರು.
ನ್ಯಾಯಮಂಡಳಿಯ ಮುಂದೆ ಅಫಿಡವಿಟ್ ಸಲ್ಲಿಸಿದ ನಂತರವಷ್ಟೇ ಸಂಧಾನ ಮಾಡಿಕೊಳ್ಳಲಾಗುವುದು. ಚುನಾವಣಾ ಸಂದರ್ಭದಲ್ಲಿ ಉತ್ತರ ಕರ್ನಾಟಕದವರು ಹೇಗೆ ಉತ್ತರ ಕೊಡುತ್ತಾರೆ ಎಂಬುದನ್ನು ಬಿಜೆಪಿಗರು ಕಾದು ನೋಡಬೇಕಷ್ಟೆ ಎಂದು ಹರಿಹಾಯ್ದರು
ಹುಬ್ಬಳ್ಳಿಯಲ್ಲಿ ತಮ್ಮ ಪರಿವರ್ತನಾ ರ್ಯಾಲಿಗಿಂತ ಮುಂಚೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು, ಮಹದಾಯಿ ಯೋಜನೆ ಕುರಿತಂತೆ ಯಾರೂ ಮಾಧ್ಯಮಗಳ ವರದಿ ನೋಡಬೇಡಿ, ನಾನು ರ್ಯಾಲಿಯಲ್ಲಿ ಈ ಕುರಿತು ಮಾತನಾಡುತ್ತೇನೆ, ಅದನ್ನು ಕೇಳಿಕೊಳ್ಳಿ ಎಂದು ವಿನಂತಿಸಿಕೊಂಡಿದ್ದರು. ಆದರೆ ಇದೊಂದು ಪರಿವರ್ತನಾ ರ್ಯಾಲಿಗೆ ಜನ ಸೇರಿಸುವ ಗಿಮಿಕ್ ಎಂದು ಅಲ್ಲಿನ ರೈತರು ಕಿಡಿಕಾರಿದ್ದರು. ನಂತರ ಯಡಿಯೂರಪ್ಪನವರು ತನ್ನ ಭಾಷಣದಲ್ಲಿ, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಕಳಸಾ ಬಂಡೂರಿ ನಾಲೆಗಳ ಮೂಲಕ ಕರ್ನಾಟಕಕ್ಕೆ ಕುಡಿಯುವ ನೀರು ಕೊಡಲು ತಯಾರಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಪಾರಿಕ್ಕರ್, ಗೋವಾದ ಸ್ಥಳೀಯ ‘ತರುಣ್ ಭಾರತ್’ ಎನ್ನುವ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘ಗೋವಾದ ಹಿತ ಬಲಿ ಕೊಡಲು ನಾವು ಸಿದ್ಧರಿಲ್ಲ. ಗೋವಾ ಜನತೆ ಆತಂಕ ಪಡುವ ಅಗತ್ಯವಿಲ್ಲ, ಗೋವಾ ಹಿತ ಬಲಿ ಕೊಟ್ಟು ಸಂಧಾನ ಮಾತುಕತೆ ಮಾಡುವುದಿಲ್ಲ. ಜನರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದರು. ಇದರಿಂದಾಗಿ ಯಡಿಯೂರಪ್ಪನವರ ರ್ಯಾಲಿಯಲ್ಲಿನ ಹೇಳಿಕೆ ಕೇವಲ ಚುನಾವಣಾ ಲಾಭಕ್ಕೆ ಸಂಬಂಧಿಸಿದ್ದು ಎಂಬ ರೈತರ ಹೇಳಿಕೆಗೆ ಪುಷ್ಠಿ ನೀಡಿತ್ತು.
ವಚನ ಭ್ರಷ್ಟ ಯಡಿಯೂರಪ್ಪ !
ಡಿಸಂಬರ್ 15 ರ ಒಳಗೆ ಈ ಸಮಸ್ಯೆಯನ್ನು ಬಗೆಹರಿಸಿ ಇಲ್ಲಿ ಕಾಲಿಡುತ್ತೇನೆ ಎಂದು ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ ಅದನ್ನು ಪಾಲಿಸದ ಯಡಿಯೂರಪ್ಪ ವಚನ ಭ್ರಷ್ಟರಾಗಿದ್ದಾರೆ. ಕಾಟಾಚಾರಕ್ಕೆಂಬಂತೆ ಅಮಿತ್ ಶಾ ನೇತೃತ್ವದಲ್ಲಿ ಸಭೆ ಕರೆದು ನಮನ್ನು ಮೂರ್ಖರನ್ನಾಗಿಸುವ ಪ್ರಯತ್ನ ನಡೆದಿದೆ ಎಂದವರು ಯಡಿಯೂರಪ್ಪನವರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
