ಜಾಮೀನಿನಲ್ಲಿ ಹೊರ ಬಂದ 107 ಕೇಸರಿ ದಾಂಧಲೆಕೋರರು
30 ಪೊಲೀಸರನ್ನು ಗಾಯಗೊಳಿಸಿದ್ದರು, ನ್ಯಾಯಾಲಯದ ಮೇಲೆ ಭಗವಾ ಧ್ವಜ ಹಾರಾಡಿಸಿದ್ದರು
ಇವರಿಗೆ ಜಾಮೀನು ಮಾತ್ರವಲ್ಲ, ಭೀಕರ ಕೊಲೆಯ ವಿರುದ್ಧ ಪ್ರತಿಭಟಿಸಿದ 200 ಮುಸ್ಲಿಮರನ್ನೂ ಬಂಧಿಸಬೇಕಂತೆ!!
2018ರ ಚುನಾವಣೆಗೆ ಸಿದ್ಧವಾಗುತ್ತಿದೆಯೇ ರಾಜಸ್ಥಾನ?
ವರದಿಗಾರ(22-12-17) : ಡಿಸೆಂಬರ್ 6 ರಂದು ರಾಜಸ್ಥಾನದ ರಾಜ್ ಸಮಂದ್ ನಲ್ಲಿ ಶಂಬೂಲಾಲ್ ಎನ್ನುವ ಹಿಂದುತ್ವವಾದಿಯೊಬ್ಬನು ಪಶ್ಚಿಮ ಬಂಗಾಳ ಮೂಲದ ಮುಸ್ಲಿಮ್ ಕಾರ್ಮಿಕನೊಬ್ಬನ ಭೀಕರ ಹತ್ಯೆ ಮಾಡಿ ಚಿತ್ರೀಕರಿಸಿದ್ದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೇಶ-ವಿದೇಶಗಳಿಂದ ಕೊಲೆಗೆ ಖಂಡನೆ ವ್ಯಕ್ತವಾಗುತ್ತಿರುವಾಗಲೇ ಡಿಸೆಂಬರ್ 14ರಂದು ಸಂಘಪರಿವಾರದ ಕಾರ್ಯಕರ್ತರು ಉದಯಪುರ ನ್ಯಾಯಾಲಯದ ಬಳಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬಳಿಕ ದಾಂಧಲೆಗಿಳಿದ ಹಿಂದುತ್ವವಾದಿಗಳು 30 ಪೊಲೀಸರನ್ನು ಗಾಯಗೊಳಿಸಿದ್ದರು. ನ್ಯಾಯಾಲದ ದ್ವಾರದ ಮೇಲೆ ಕೇಸರಿ ಧ್ವಜವನ್ನೂ ಪ್ರದರ್ಶಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 107 ಸಂಘಪರಿವಾರದ ಕಾರ್ಯಕರ್ತರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.ಆದರೆ, ನಂತರದ ದಿನಗಳಲ್ಲಿ ಉದಯಪುರಕ್ಕೆ ಮುತ್ತಿಗೆ ಹಾಕಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರ ಬೇಡಿಕೆಗೆ ಬಗ್ಗಿ ಬಂಧನಕ್ಕೊಳಗಾದ ಎಲ್ಲ 107 ಕಾರ್ಯಕರ್ತರನ್ನೂ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು. ಆದರೆ, ಅಷ್ಟಕ್ಕೆ ಸಂತುಷ್ಟರಾಗದ ಸಂಘಪರಿವಾರದ ಕಾರ್ಯಕರ್ತರು ಇದೀಗ ಕೊಲೆಯನ್ನು ಪ್ರತಿಭಟಿಸಿದ ಮುಸ್ಲಿಮರ ಬಂಧನವನ್ನೂ ಆಗ್ರಹಿಸುತ್ತಿದ್ದಾರೆ. ದೇಶವನ್ನೇ ನಡುಗಿಸಿದ ಭೀಕರ ಕೊಲೆಯನ್ನು ಪ್ರತಿಭಟಿಸಿ ಮುಸ್ಲಿಮರು ಡಿಸೆಂಬರ್ 8ರಂದು ರಾಜಸ್ಥಾನದ ಮೇವಾರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ‘ದೇಶ ವಿರೋಧಿ’ ಘೋಷಣೆಗಳನ್ನು ಕೂಗಲಾಗಿದೆ ಎಂದೂ ಅರೋಪಗಳಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಇದೀಗ ಬಜರಂಗದಳ ಹಾಗೂ ವಿಹಿಂಪದ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಮಾರು 200 ಮುಸ್ಲಿಮರನ್ನು ಬಂಧಿಸಲು ಆಗ್ರಹಿಸುತ್ತಿದ್ದಾರೆ.
