ವರದಿಗಾರ (ಡಿ.21): ಬಿಜೆಪಿ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿರುವ ಬಿಜೆಪಿಯ ಮಿತ್ರಪಕ್ಷ ಶಿವಸೇನೆ, ಚುನಾವಣೆಗಳಲ್ಲಿ ಇವಿಎಂ ಗಳಲ್ಲಿ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಹಾರ್ದಿಕ್ ಪಟೇಲ್ ಹೇಳುತ್ತಿರುವುದು ನಿಜವಾಗಿದ್ದರೆ ಗುಜರಾತ್ ಗೆಲುವಿಗಾಗಿ ಬಿಜೆಪಿಯು ಮೋದಿಯವರ ಜೊತೆಗೆ ಇವಿಎಂ ಯಂತ್ರಗಳಿಗೂ ಹಾರವನ್ನುಹಾಕಿ ಅಭಿನಂದಿಸಲಿ ಎಂದು ವ್ಯಂಗ್ಯವಾಡಿದೆ.
150ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುತ್ತೇವೆ ಎಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದರು. ಆದರೆ ಗುಜರಾತಿನ ಜನತೆ ಅವರಿಗೆ 100 ಸ್ಥಾನವನ್ನೂ ನೀಡಿಲ್ಲ.
ಗುಜರಾತಿನಲ್ಲಿ ಬಿಜೆಪಿ ಗೆಲುವಿಗೆ ಮುಂಬೈಯಲ್ಲಿ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡುತ್ತಾ, 100ರ ಗಡಿ ದಾಟದಿದ್ದರೂ ಇಲ್ಲಿ ಕೆಲವರು ವಿಜಯೋತ್ಸವ ಆಚರಿಸುತ್ತಿದ್ದಾರೆ. ನಿಜವಾಗಿ ಅವರು ಈ ಗೆಲುವಿನ ಅರ್ಥವನ್ನು ತಿಳಿದಿಲ್ಲ. ಚುನಾವಣೆಯನ್ನು ಗೆಲ್ಲಲು ಬಿಜೆಪಿ ಯಾವ ಮಟ್ಟಕ್ಕೂ ಇಳಿಯುತ್ತದೆ ಎಂಬುವುದನ್ನು ಗುಜರಾತ್ ಚುನಾವಣೆ ತೋರಿಸಿಕೊಟ್ಟಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
