ವರದಿಗಾರ (19-12-17): ಉತ್ತರ ಪ್ರದೇಶದ ಮೀರತ್ ನ ಮಾಲಿವಾರ ಎಂಬ ಹಿಂದೂ ಬಾಹುಳ್ಯವಿರುವ ಪ್ರದೇಶದಲ್ಲಿ ಮುಸ್ಲಿಮರಿಗೆ ಮನೆ ಮಾರಾಟ ಮಾಡದಂತೆ ಸ್ಥಳೀಯ ಹಿಂದೂಗಳು ತಡೆದ ಘಟನೆ ವರದಿಯಾಗಿದೆ.
ಮೀರತ್ ನ ಇಸ್ಮಾಯಿಲ್ ನಗರದ ನಿವಾಸಿ ನೌಮಾನ್ ಎಂಬವರು ಮಾಲಿವಾರದಲ್ಲಿರುವ ವ್ಯಾಪಾರಿ ಸಂಜಯ್ ರಸ್ತೋಗಿಯವರ ಮನೆಯನ್ನು 28 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದರು. ಆದಿತ್ಯವಾರದಂದು ರಾತ್ರಿ ರಸ್ತೋಗಿ ತನ್ನ ಮನೆಯನ್ನು ನೌಮಾನ್ ರಿಗೆ ಹಸ್ತಾಂತರಿಸಲು ಬಂದಾಗ ಸ್ಥಳೀಯ ಹಿಂದೂಗಳು ಪ್ರತಿಭಟಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದರು. ತನ್ನಿಂದ ಪಡೆದ ಹಣವನ್ನು ಹಿಂತಿರುಗಿಸಿದರೆ ಮನೆಯನ್ನು ಹಸ್ತಾಂತರಿಸುವುದಕ್ಕೆ ನೌಮಾನ್ ತಯಾರಾದರು.
ಅವರಿಂದ ಫೆಬ್ರವರಿ 18 ರ ವರೆಗೆ ಕಾಲಾವಕಾಶ ಪಡೆದುಕೊಂಡು ಹಣ ಹಿಂತಿರುಗಿಸುವ ಭರವಸೆ ನೀಡಲಾಯಿತು.
ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ಅಲ್ಲಿನ ಬಿಜೆಪಿಯ ಯುವ ನಾಯಕ ದೀಪಕ್ ಶರ್ಮಾ “ಹಲವು ಹಿಂದೂ ಬಾಹುಳ್ಯದ ಪ್ರದೇಶಗಳು ಕೆಲವೇ ವರ್ಷಗಳಲ್ಲಿ ಮುಸ್ಲಿಂ ಬಾಹುಳ್ಯ ಪ್ರದೇಶಗಳಾಗಿ ಬದಲಾಗಿವೆ, ಈ ರೀತಿ ಮುಂದುವರಿಯಲು ನಾವು ಅನುಮತಿ ನೀಡುವುದಿಲ್ಲ” ಎಂದು ಹೇಳಿದರು.
