ವರದಿಗಾರ (20.12.2017) : ಮೂಡಬಿದಿರೆಯ ಶ್ರೀ ಧವಳಾ ಕಾಲೇಜಿನ ತೃತೀಯ ಬಿ ಎ ವಿದ್ಯಾರ್ಥಿ ಶ್ರೀ ಅನ್ಸಿಲ್ ಪ್ರಿನ್ಸಿಸ್ಟನ್ ಸೆರಾವೋ ಎಂಬ ವಿದ್ಯಾರ್ಥಿಯು ತನ್ನ ಕಾಲೇಜಿನ ಪಠ್ಯೇತರ ಚಟುವಟಿಕೆಯಾದ “ದಿವ್ಯಾಸ್ ಸೇವಾ” ಯೋಜನೆಯ ಭಾಗವಾಗಿ ತನ್ನೂರಿನಲ್ಲಿ ಶ್ರಮದಾನ, ಸ್ವಚ್ಚತಾ ಕಾರ್ಯಗಳನ್ನು ಮಾಡಿ, ಆ ಮೂಲಕ ಊರ ನಾಗರಿಕರು ಉದಾರವಾಗಿ ನೀಡಿದ ಹಣವನ್ನು ಪ್ರಧಾನಮಂತ್ರಿಗಳ ಪ್ರಾಕೃತಿಕ ವಿಕೋಪ ನಿಧಿಗೆ ನೀಡಿ ಉದಾರತೆ ಮೆರೆದಿದ್ದಾರೆ.
ತನ್ನ ಯೋಜನೆಯ “ಸ್ವಚ್ಚತೆ ಮತ್ತು ಶ್ರಮದಾನ” ಪರಿಕಲ್ಪನೆಯ ಅಡಿಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಬೆಳುವಾಯಿಯ ಸುಮಾರು 35 ಮಂದಿಯ ಮನವೊಲಿಸಿ, ಅವರನ್ನೂ ತನ್ನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ಒಂದು ತಂಡವಾಗಿ ಬೆಳುವಾಯಿಯ ನಾಗರಿಕರ ತೋಟದ ಮತ್ತು ಮನೆ ಪರಿಸರದ ಕೆಲಸಗಳನ್ನು ಮಾಡಿಕೊಟ್ಟು, ಊರವರು ಉದಾರತೆಯಿಂದ ಕೊಟ್ಟಂತಹಾ ಹಣವನ್ನು ಒಟ್ಟು ಸೇರಿಸಿ, ಸುಮಾರು 7000 ರೂಪಾಯಿಗಳನ್ನು ಪ್ರಧಾನ ಮಂತ್ರಿಯವರ ‘ಪ್ರಾಕೃತಿಕ ವಿಕೋಪ’ ನಿಧಿಗೆ ಕಳುಹಿಸಿಕೊಟ್ಟು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಇದರೊಂದಿಗೆ ಅನ್ಸಿಲ್ ರವರು ಕಡಲಕೆರೆಯ ಸಂತ ಇಗ್ನೇಶಿಯಸ್ ಲೊಯೊಲಾ ಶಾಲೆ, ಮೂಡಬಿದಿರೆ, ಇದರ ಶಾಲಾ ವಠಾರವನ್ನು ಕೂಡಾ ತನ್ನ ಸ್ವಂತ ಮುತುವರ್ಜಿಯಿಂದ ಸ್ವಚ್ಚಗೊಳಿಸಿ, ಶಾಲಾ ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
