ವರದಿಗಾರ(ಡಿ.20): ಬಿಜಾಪುರದ ವಿಜಯಪುರದಲ್ಲಿ ದಲಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವನ್ನು ಎಸಗಿ, ಕೊಲೆ ಮಾಡಿರುವ ಅತ್ಯಂತ ನೀಚ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯ ಸಮಿತಿ ಕಠಿಣ ಶಬ್ದಗಳಿಂದ ಖಂಡಿಸಿದ್ದು, ಆರೋಪಿಗಳನ್ನು ತಕ್ಷಣವಾಗಿ ಬಂಧಿಸಿ, ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸಿದೆ.
ಇಲ್ಲಿನ ಶಾಲೆಯೊಂದರ ಒಂಬತ್ತನೇ ತರಗತಿ ವಿದ್ಯಾರ್ಥಿನಿಯನ್ನು, ಊಟದ ಬಿಡುವಿನ ಸಮಯದಲ್ಲಿ ಯುವಕನೊಬ್ಬ ಕರೆದೊಯ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ಕೆಲ ಹೊತ್ತಿನ ಬಳಿಕ ಆಕೆ ಪ್ರಜ್ಞಾಹೀನಳಾಗಿದ್ದಳು. ಚಿಕಿತ್ಸೆಗಾಗಿ ನಗರದ ಸಾಯಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾಳೆ.
ಈ ಘಟನೆಯಿಂದ ರಾಜ್ಯ ತಲೆತಗ್ಗಿಸುವಂತಾಗಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳಾದ ದಲಿತ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಹಲ್ಲೆಗಳು ಮಿತಿಮೀರುತ್ತಿರುವುದರ ಮುಂದುವರಿದ ಭಾಗವಾಗಿದೆ ಈ ಘಟನೆ.
ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿರುವ ಕಾಮುಕರು ಎಷ್ಟೇ ಪ್ರಭಾವಿತರಾದರೂ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು, ದುಃಖತಪ್ತ ಕುಟುಂಬಕ್ಕೆ ನ್ಯಾಯವನ್ನು ನೀಡುವುದರ ಜೊತೆಗೆ ಸೂಕ್ತ ಪರಿಹಾವನ್ನು ನೀಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪತ್ರಿಕಾ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
