ವರದಿಗಾರ (ಡಿ.19): ಒಂದು ವೇಳೆ ಇಂದಿನ ಈ ಪ್ರತಿಭಟನಾ ಸಭೆಯಲ್ಲಿ ಪೊಲೀಸರು ಇಲ್ಲದಿರುತ್ತಿದ್ದರೆ ಇಲ್ಲಿ ಸೇರಿದ ಪ್ರತಿಭಟನಾಕಾರರ ಕೈಯಲ್ಲಿ ತಲ್ವಾರ್ಗಳು ಇರುತ್ತಿದ್ದವು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದ ಪ್ರಜ್ಞಾ ಪ್ರವಾಹದ ಸಂಚಾಲಕ ರಘುನಂದನ್ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ.
ಇತ್ತೀಚೆಗೆ ಹೊನ್ನಾವರದಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಯುವಕ ಪರೇಶ ಮೇಸ್ತ ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ.
‘ಹಿಂದೂಗಳು ಮೂಲತಃ ಶಾಂತಿಪ್ರಿಯರು. ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂಗಳ ಹತ್ಯೆಯ ಮೂಲಕ ಕೆಣಕುತ್ತಿದೆ. ಕೇಸರಿ ಧ್ವಜಗಳ ಬದಲು ಕಲ್ಲುಗಳು ಹಿಡಿದಿದ್ದರೆ ಸುತ್ತಲಿನ ಕಟ್ಟಡಗಳು ನೆಲಸಮವಾಗುತ್ತಿದ್ದವು’ ಎಂದು ಸರಕಾರಕ್ಕೆ ಎಚ್ಚರಿಸಿದ್ದಾರೆ.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಮುಲ್ಲಾ ಸಿದ್ದರಾಮಯ್ಯ ಸರಕಾರ ದೇಶದ್ರೋಹಿಗಳನ್ನು ಪೋಷಿಸುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದವರ ನಾಲಿಗೆ ಕತ್ತರಿಸುತ್ತೇವೆ’ ಎಂದಿರುವುದಾಗಿ ಮೂಲಗಳು ವರದಿ ಮಾಡಿವೆ.
