ವರದಿಗಾರ (18.12.2017) : ಬಿಜೆಪಿಯು ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಪಡೆದು ಅಧಿಕಾರವನ್ನುಳಿಸಿಕೊಂಡಿದೆಯಾದರೂ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರೂರಿನಲ್ಲಿ ಹೀನಾಯ ಸೋಲನ್ನನುಭವಿಸಿ ಮುಖಭಂಗಕ್ಕೀಡಾಗಿದೆ. ಮೋದಿಯವರ ತವರು ನೆಲವಾದ ವಡ್ನಗರ್ ಒಳಗೊಂಡ ಮೆಹ್ಸಾನಾ ಜಿಲ್ಲೆಯ ಊಂಜಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿದೆ.
ಕಾಂಗ್ರೆಸಿನ ಪಟೇಲ್ ಆಶಾಬೆನ್ ದ್ವಾರಕಾದಾಸ್, ಬಿಜೆಪಿಯ ಹಾಲಿ ಶಾಸಕರಾಗಿದ್ದಂತಹಾ ನಾರಾಯನ್ ಭಾಯಿ ಲಲ್ಲೂದಾಸ್ ಪಟೇಲ್ ರನ್ನು 19000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದು ಕಾಂಗ್ರೆಸ್ಸಿಗೆ ದೊರೆತ ಮಹತ್ವದ ಉಡುಗೊರೆಯಂದೇ ಬಣ್ಣಿಸಲ್ಪಟ್ಟಿದೆ. ಮೆಹ್ಸಾನಾ ಜಿಲ್ಲೆಯಲ್ಲಿ 28-30 ಶೇಕಡಾ ಪಟೇಲ್ ಸಮುದಾಯದ ಮತ್ತು 9.5 ಶೇಕಡಾ ಮುಸ್ಲಿಮರ ಮತಗಳಿವೆ. ಈ ಎರಡು ಸಮುದಾಯಗಳು ಕಾಂಗ್ರೆಸಿನ ಕೈ ಹಿಡಿದಿದ್ದೇ ಕಾಂಗ್ರೆಸ್ ಗೆಲುವಿಗೆ ಕಾರಣವೆನ್ನಲಾಗಿದೆ
ಉತ್ತರ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ಪಟೇಲ್ ಸಮುದಾಯದ ಮೀಸಲಾತಿಗಾಗಿ ನಡೆದಿದ್ದ ಹಿಂಸಾತ್ಮಕ ಹೋರಾಟದಲ್ಲಿ 12 ಮಂದಿ ಪಟೇಲ್ ಸಮುದಾಯದ ಯುವಕರು ಮೃತಪಟ್ಟಿದ್ದರು. ಪಟೇಲರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಕೂಡಾ ಪಟೇಲ್ ಸಮುದಾಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತಾದರೂ, ಮತದಾರರು ಮಾತ್ರ ಬಿಜೆಪಿಗೆ ಗೇಟ್ ಪಾಸ್ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತನ್ನ ಪ್ರಚಾರದ ಸಮಯದಲ್ಲಿ, ಊಂಜಾದ ಉಮಿಯಾ ಮಠದ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಇದು ಪಟೇಲರ ಪವಿತ್ರ ಕ್ಷೇತ್ರವಾಗಿದೆ.
