ವರದಿಗಾರ (18.12.2017) : ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಊನಾ ದಲಿತ ಚಳವಳಿಯ ನೇತಾರ ಜಿಗ್ನೇಶ್ ಮೇವಾನಿ, ವಡ್ಗಾಂವ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ವಿಜಯ ಪತಾಕೆ ಹಾರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್ ಡಿ ಪಿ ಐ ” ಜಿಗ್ನೇಶ್ ಮೇವಾನಿಯ ಗೆಲುವು, ಅದು ಡಾ ಬಿ ಆರ್ ಅಂಬೇಡ್ಕರ್ ಆಶಯದ ಗೆಲುವಾಗಿದೆ” ಎಂದು ಬಣ್ಣಿಸಿದೆ. ಎಸ್ ಡಿ ಪಿ ಐ ಕೂಡಾ ಜಿಗ್ನೇಶ್ ಮೇವಾನಿಯ ಉಮೇದುವಾರಿಕೆಗೆ ಬೆಂಬಲ ಸೂಚಿಸಿತ್ತಲ್ಲದೆ, ಅವರ ಪರವಾಗಿ ಚುನಾವಣಾ ಪ್ರಚಾರದ ಕಣಕ್ಕಿಳಿದಿತ್ತು.
ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರು ‘ ಶೋಷಿತ ವರ್ಗವು ಯಾರದೇ ಗುಲಾಮರಾಗಿರದೆ, ಸ್ವತಂತ್ರ ರಾಜ್ಯಾಧಿಕಾರ ಪಡೆದಾಗ ಮಾತ್ರ ಅವರಿಗೆ ನ್ಯಾಯ ಸಿಗಲು ಸಾಧ್ಯ’ ಎಂದಿದ್ದರು. ಜಿಗ್ನೇಶ್ ರವರ ಗೆಲುವು ಆ ಕುರಿತು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಎಂದು ಎಸ್ ಡಿ ಪಿ ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ರವರು ತಿಳಿಸಿದ್ದಾರೆ.
ಜಿಗ್ನೇಶ್ ಮೇವಾನಿ ಸ್ಪರ್ಧಿಸಿದ್ದ ವಡ್ಗಾಂವ್ ಕ್ಷೇತ್ರವನ್ನು ಕೈವಶಪಡಿಸಿಕೊಳ್ಳಲು ಬಿಜೆಪಿ ಬಹಳಷ್ಟು ಶ್ರಮ ವಹಿಸಿತ್ತು. ಅದನ್ನೊಂದು ತನ್ನ ಪ್ರತಿಷ್ಟೆಯ ಪ್ರಶ್ನೆಯನ್ನಾಗಿಸಿಕೊಂಡಿತ್ತು. ಎಸ್ ಡಿ ಪಿ ಐ ಕೂಡಾ ಅಲ್ಲಿ ಪ್ರಚಾರಕ್ಕಿಳಿದಾಗ ಬಿಜೆಪಿ ನಮ್ಮ ಪಕ್ಷದ ಮೇಲೆ ಹಲವು ಆರೋಪಗಳನ್ನು ಹೊರಿಸಿರುವುದು ಅದರ ಹತಾಶ ಭಾವನೆಯನ್ನು ಹೊರಗೆಡಹಿತ್ತು. ಆದರೆ ನಮ್ಮ ಪಕ್ಷವು ಅಲ್ಲಿನ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದಾಗ, ಆ ಕ್ಷೇತ್ರದಾದ್ಯಂತ ಜನಪ್ರಿಯರಾಗಿದ್ದ ಮತ್ತೋರ್ವ ಸ್ವತಂತ್ರ ಅಭ್ಯರ್ಥಿ ಅಶ್ವಿನ್ ಕುಮಾರ್ ರವರ ಪರ ಜನಬೆಂಬಲವಿತ್ತು. ಆದರೆ ಅಲ್ಲಿನ ಜನರಿಗೆ ನಿಮ್ಮ ಮುಂದೆ ಆಯ್ಕೆ ಮಾಡಬೇಕಾಗಿರುವ ಆದ್ಯತೆಗಳೇನು ಹಾಗೂ ಜಿಗ್ನೇಶ್ ರವರ ಸೇವೆ ಇಡೀ ಗುಜರಾತಿಗೆ ಬೇಕಾಗಿದೆ. ಆ ಕುರಿತು ಚಿಂತಿಸಬೇಕೆಂಬುವುದನ್ನು ಬಹಳ ಸ್ಪಷ್ಟವಾಗಿ ಮತದಾರ ಮನಸ್ಸಿಗೆ ನಾಟುವಂತೆ ತಿಳಿಸಿಕೊಟ್ಟಿದ್ದೆವು. ಮಾತ್ರವಲ್ಲ ಅದು ಫಲ ನೀಡಿತು ಎಂದು ಅಬ್ದುಲ್ ಮಜೀದ್ ಪ್ರಚಾರದ ಸಮಯದ ಅನುಭವವನ್ನು ‘ವರದಿಗಾರ‘ ಕ್ಕೆ ತಿಳಿಸಿದ್ದಾರೆ.
ದೇಶದಲ್ಲಿ ಇಂದು ಫ್ಯಾಸಿಸ್ಟರ ವಿರುದ್ಧ ಹಲವು ರೀತಿಯ ಚಳವಳಿಗಳು ನಡೆಯುತ್ತಿದೆ. ಜಿಗ್ನೇಶ್ ಮೇವಾನಿಯವರ ಗೆಲುವು ಅದಕ್ಕೆಲ್ಲಾ ಸ್ಪೂರ್ತಿಯಾಗಿದೆ. ಇನ್ನೊಂದು ರೀತಿಯಲ್ಲಿ ವಿಮರ್ಶಿಸುವುದಾದರೆ ಇದು ‘ಚಳವಳಿಗಳ ಗೆಲುವು” ಎಂದೂ ಬಣ್ಣಿಸಬಹುದಾಗಿದೆ ಎಂದು ಮಜೀದ್ ತಿಳಿಸಿದರು.
