ವರದಿಗಾರ (ಡಿ.17): ದೇಶದ ರಾಜಕೀಯ ಶುದ್ಧೀಕರಣ ಮಾಡಬೇಕೆಂದರೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕಿತ್ತೊಗೆಯಬೇಕೆಂದು ಜನತಾ ದಳ(ಸಂಯುಕ್ತ) ಶರದ್ ಯಾದವ್ ಬಣದ ರಾಷ್ಟ್ರೀಯ ಹಂಗಾಮಿ ಅಧ್ಯಕ್ಷ ಕೆ. ರಾಜಶೇಖರನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಯು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ರಾಜಕೀಯ ಶುದ್ಧಿಯ ಕುರಿತು ಮಾತನಾಡುತ್ತಾ, ಕೇಂದ್ರ ಸರಕಾರ ಬಡವರು, ಗ್ರಾಮೀಣ ಜನರ ಪರವಾಗಿಯಿಲ್ಲ. ಮೋದಿ ಸರ್ವಾಧಿಕಾರಿ ನಡೆಗಳಿಂದ ಸಾಮಾನ್ಯ ಜನ ರೋಸಿ ಹೋಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತು ಅಮಿತ್ ಷಾ ತಂತ್ರಗಳು ನಡೆಯುವುದಿಲ್ಲ. ಬಿಜೆಪಿ ಸೋಲನುಭವಿಸುವುದು ಖಚಿತ ಎಂದು ಕೇಂದ್ರ ಸರಕಾರದ ಭವಿಷ್ಯ ನುಡಿದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿಕೊಳ್ಳುವ ಮೋದಿ ತಮ್ಮ ಪಕ್ಷದ ಒಳಗಿರುವ ಭ್ರಷ್ಟರ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಭ್ರಷ್ಟಾಚಾರದ ವಿಷಯ ದೇಶಕ್ಕೆ ಗೊತ್ತಿದೆ ಎಂದು ಯಡಿಯೂರಪ್ಪರಿಗೆ ಟಾಂಗ್ ನೀಡಿದ್ದಾರೆ.
ಕರ್ನಾಟಕದಲ್ಲಿ ಜೆಡಿಯು ಬಲಿಷ್ಠವಾದರೆ ದೇಶದ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ. ವ್ಯತ್ಯಾಸಗಳನ್ನು ಬದಿಗಿಟ್ಟು ಪಕ್ಷ ಸಂಘಟನೆ ಕಡೆಗೆ ಕಾರ್ಯಕರ್ತರು ಗಮನ ಹರಿಸಬೇಕೆಂದು ಕರೆ ನೀಡಿದರು. ಶರದ್ ಯಾದವ್ ಒಮ್ಮೆಯಾದರೂ ಪ್ರಧಾನಿ ಆಗಬೇಕು. ಅದಕ್ಕಾಗಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
