ವರದಿಗಾರ (16.12.2017) : ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿಧ್ವಾಂಸ ಡಾ. ಝಾಕೀರ್ ನಾಯ್ಕ್ ವಿರುದ್ಧದ ರೆಡ್ ಕಾರ್ನರ್ ನೋಟೀಸನ್ನು ಇಂಟರ್ ಪೋಲ್ ರದ್ದುಪಡಿಸಿದೆ. 2017 ಅಕ್ಟೋಬರ್ 24-27 ರ ವೇಳೆ ನಡೆದ ಇಂಟರ್ ಪೋಲ್ ಕಮಿಷನ್ನಿನ 102 ನೇ ಅಧಿವೇಶನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಸರ್ಕಾರ, ಝಾಕೀರ್ ನಾಯ್ಕ್ ವಿರುದ್ಧ ಸಲ್ಲಿಸಿದ್ದ ಎಲ್ಲಾ ದಾಖಲೆಗಳನ್ನು ನವಂಬರ್ 9ರಂದು ಇಂಟರ್ ಪೋಲ್ ತಮ್ಮ ದಾಖಲೆಗಳಿಂದ ಅಳಿಸಿ ಹಾಕಿದೆ. ಈ ಎಲ್ಲಾ ಮಾಹಿತಿಗಳನ್ನು ಇಂಟರ್ ಪೋಲ್, ಡಿಸಂಬರ್ 11 ರಂದು ಲಂಡನ್ನಿನಲ್ಲಿರುವ ಝಾಕೀರ್ ನಾಯ್ಕ್’ರ ಕಾನೂನು ಸಂಸ್ಥೆಗೆ ತಿಳಿಸಲಾಗಿದೆ.
ರೆಡ್ ಕಾರ್ನರ್ ನೋಟೀಸ್ ರದ್ದುಗೊಳಿಸಲು ಕಾರಣಗಳನ್ನು ನೀಡಿದ ಇಂಟರ್ ಪೋಲ್, ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಾಗೂ ಭಾರತ ಸರ್ಕಾರ ಸಲ್ಲಿಸಿರುವ ಮಾಹಿತಿಗಳು ರಾಜಕೀಯ ಮತ್ತು ಧಾರ್ಮಿಕ ದುರುದ್ದೇಶಗಳಿಂದ ಕೂಡಿದೆ ಎಂದು ಬೊಟ್ಟು ಮಾಡಿದೆ. ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸದುದ್ದೇಶಗಳೇನೂ ಇರಲಿಲ್ಲವೆಂದಿದೆ.
ಡಾ. ಝಾಕೀರ್ ನಾಯ್ಕ್ ಪ್ರತಿಕ್ರಿಯೆ :
ಇಂಟರ್ ಪೋಲ್ ತನ್ನ ವಿರುದ್ಧದ ರೆಡ್ ಕಾರ್ನರ್ ನೋಟೀಸನ್ನು ರದ್ದುಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಝಾಕೀರ್ ನಾಯ್ಕ್, ನಾನೀಗ ನಿರಾಳನಾಗಿದ್ದೇನೆ. ಆದರೆ ನನ್ನದೇ ರಾಷ್ಟ್ರ ಭಾರತವೂ ಕೂಡಾ ನನ್ನ ವಿರುದ್ಧ ಹಾಕಿರುವ ಸುಳ್ಳಾರೋಪಗಳ ವಿರುದ್ಧ ನ್ಯಾಯ ದೊರಕಿಸಿದರೆ ನಾನು ಇನ್ನಷ್ಟು ಸಂತೋಷಗೊಳ್ಳುತ್ತೇನೆ. ಅದು ಸಾಧ್ಯವಾಗುತ್ತದೆಯೆನ್ನುವ ವಿಶ್ವಾಸವಿದೆ. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನಗೆ ಸಿಕ್ಕಿರುವ ನ್ಯಾಯ ಭಾರತದಲ್ಲೂ ಸಿಗುವುದೆನ್ನುವ ವಿಶ್ವಾಸವಿದೆ ಎಂದಿದ್ದಾರೆ.
