ವರದಿಗಾರ (ಡಿ.16):ಮುಝಫರ್ನಗರದಲ್ಲಿ 2013ರಲ್ಲಿ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಸಚಿವ ಸುರೇಶ್ ರಾಣಾ, ಕೇಂದ್ರದ ಮಾಜಿ ಸಚಿವ ಸಂಜೀವ್ ಬಲ್ಯಾನ್, ಬಿಜೆಪಿ ಶಾಸಕ ಸಂಗೀತ್ ಸೋಮು, ಉಮೇಶ್ ಮಲಿಕ್ ಹಾಗೂ ಇತರರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸೆಕ್ಷನ್ 153ಎ ಅಡಿಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ರಾಜ್ಯ ಸರಕಾರವನ್ನು ಎಸ್ಐಟಿ ಅಧಿಕಾರಿಗಳು ಕೋರಿದ್ದು, ಸರಕಾರ ಅನುಮತಿ ನೀಡಿದೆ.
ಆರೋಪಿಗಳು 2013 ಆಗಸ್ಟ್ ಕೊನೆಯ ವಾರದಲ್ಲಿ ಮಾಡಿದ ಕೋಮು ಭಾಷಣ, ಇಲ್ಲಿ ಕೋಮುಗಲಭೆಯನ್ನಯ ಸೃಷ್ಟಿಸಿತ್ತು.. ಆಗಸ್ಟ್–ಸೆಪ್ಟೆಂಬರ್ನಲ್ಲಿ ಜರುಗಿದ ಈ ಘಟನೆಯಲ್ಲಿ ಸುಮಾರು 60 ಜನ ಪ್ರಾಣ ಕಳೆದುಕೊಂಡಿದ್ದಲ್ಲದೆ ಸುಮಾರು 4,000 ಮಂದಿ ನಿರಾಶ್ರಿತರಾಗಿದ್ದರು. ಹಾಗಾಗಿ ಎಲ್ಲಾ ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಮೂರ್ತಿ ಮಧು ಗುಪ್ತಾ ಅವರು ಶುಕ್ರವಾರ ಈ ಆದೇಶ ಹೊರಡಿಸಿದ್ದು, ಜನವರಿ 19, 2018ರಂದು ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ ಎಂದು ವಿಶೇಷ ತನಿಖಾ ದಳದ(ಎಸ್ಐಟಿ) ಅಧಿಕಾರಿಗಳು ಹೇಳಿದ್ದಾರೆ.
