- ಪ್ರತಾಪ್ ಸಿಂಹ ಮತ್ತು ಅನಂತಕುಮಾರರ ಹೇಳಿಕೆಗಳು ವೈಯುಕ್ತಿಕ, ಪಕ್ಷದ್ದಲ್ಲ
ವರದಿಗಾರ (ಡಿ.14): ಮುಂಬರುವ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ‘ಕಠಿಣ ಹಿಂದುತ್ವಕ್ಕೆ ಯಾವುದೇ ಯೋಜನೆ ಅಥವಾ ತಂತ್ರ ಇಲ್ಲ’ ಎಂದು ಹೇಳಿದ್ದಾರೆ.
ಸಂಸತ್ ಸದಸ್ಯರಾದ ಪ್ರತಾಪ್ ಸಿಂಹ ಮತ್ತು ಅನಂತ ಕುಮಾರ್ ಹೆಗಡೆ ಸೇರಿದಂತೆ ಪಕ್ಷದ ನಾಯಕರ ವರ್ತನೆಗಳನ್ನು ಖಂಡಿಸಿದ ಅವರು, ಅನಂತ ಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹರವರ ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷವು ದೂರವುಳಿಯಲು ಬಯಸಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ಜೊತೆ ಮಾತನಾಡುತ್ತಾ ಯಡಿಯೂರಪ್ಪ, ನಾವು ಕಠಿಣ ಹಿಂದುತ್ವದ ನೀತಿಗಳಿಂದ ದೂರವುಳಿದು, ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ನನ್ನ ಸರಕಾರದ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿಯನ್ನು ಜನರಿಗೆ ತಿಳಿಸುತ್ತಾ ನಾವು ಜನರ ಬಳಿಗೆ ಹೋಗುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಅನಂತ್ ಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹ ಇಬ್ಬರೂ ಮೂಲತಃ ಸಿಡುಕು ಸ್ವಭಾವದವರು. ಸಹಜವಾಗಿ ಅವರು ವ್ಯಕ್ತಪಡಿಸುವ ಅಭಿಪ್ರಾಯ ಮತ್ತು ಹೇಳಿಕೆಗಳಲ್ಲಿ ಅದು ವ್ಯಕ್ತವಾಗಿರಬಹುದು ಎಂದು ಇಬ್ಬರು ಸಂಸದರ ಪ್ರಚೋದನಕಾರಿ ಭಾಷಣಗಳನ್ನು ಸಮರ್ಥಿಸುವ ಕಾರ್ಯವನ್ನೂ ಯಡಿಯೂರಪ್ಪ ಮಾಡಿದ್ದಾರೆ.
