ವರದಿಗಾರ (ಡಿ.12): ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದವರು ನಡೆಸಿದ ಅಹಿತಕ ಘಟನೆಯನ್ನು ಗಮನಿಸುವಾಗ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆಯಿಂದ ಇಂತಹ ಕೃತ್ಯಗಳಿಗೆ ಕೈ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತವನ್ನು ಸೆಳೆಯಲು ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪರಿಗೆ ರಾಜಕೀಯ ಸಂಸ್ಕೃತಿಯಿಲ್ಲ. ನಾನು 40 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಹಾಗಿದ್ದೂ, ನಾನೇಕೆ ನನ್ನನ್ನು ಮೋದಿ ಮತ್ತು ಯಡಿಯೂರಪ್ಪರಿಗೆ ಹೋಲಿಕೆ ಮಾಡಿಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ.
