ವರದಿಗಾರ (09.12.2017): ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ತಮಗೆ ಎದುರಾದ ಸಂಸದ ಪ್ರತಾಪಸಿಂಹರಿಗೆ, ‘ಏನಯ್ಯ ಪ್ರತಾಪ, ವಿರಾಟ್ ಕೊಹ್ಲಿ ತರ ಗಡ್ಡ, ಮೀಸೆ ಬಿಟ್ಟಿದ್ದೀಯ. ನಿನಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆ. ಏನೇನೋ ಮಾತನಾಡಿ ಹಾಳು ಮಾಡಿಕೊಳ್ಳಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಪ್ರೀತಿಯಿಂದ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಮಂಜುಳಾ ಮಾನಸರು ತಮ್ಮ ವಿರುದ್ಧ ಪೊಲೀಸ್ ಕಮಿಷನರ್ಗೆ ನೀಡಿರುವ ದೂರಿನ ವಿಚಾರವನ್ನು ಮುಖ್ಯಮಂತ್ರಿ ಬಳಿ ಸಿಂಹ ಪ್ರಸ್ತಾಪಿಸುತ್ತಾ, ‘ಏನ್ ಸರ್, ಪದೇ ಪದೇ ನನಗೆ ಬೈಯ್ಯುತ್ತೀರಿ’ ಎಂದು ಕುಶಲೋಪರಿಯಾಗಿ ಪ್ರತಾಪ್, ಸಿದ್ದರಾಮಯ್ಯರೊಂದಿಗೆ ಪ್ರಶ್ನಿಸಿದ್ದಾರೆ. ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮಂಜುಳಾಗೆ ಹೇಳುತ್ತೇನೆ ಬಿಡು. ಆದರೆ, ನೀನಿನ್ನೂ ಚಿಕ್ಕವ, ಹಾಗೆಲ್ಲಾ ಮಾತನಾಡಬೇಡ, ತಾಳ್ಮೆಯಿಂದ ಇರು. ಆಕ್ರಮಣಕಾರಿ ವರ್ತನೆ ತೋರಬೇಡ ಎಂದು ಕಿವಿಮಾತು ನೀಡಿದ್ದಾರೆ. ಪ್ರತಾಪ್ ಕೂಡ ಅಷ್ಟೇ ವಿನಯದಿಂದ ಸಲಹೆಯನ್ನು ಆಲಿಸಿದ್ದಾರೆ. ಈ ಸಂದರ್ಭದಲ್ಲಿ ಮಂಜುಳಾ ಕೂಡ ಸ್ಥಳದಲ್ಲಿದ್ದರು.
ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡರು. ‘ಸಿದ್ದರಾಮಯ್ಯರು ಪ್ರೀತಿಯಿಂದ ಮೈದಡವಿ ನನಗೆ ಕೆಲ ಸಲಹೆ ನೀಡಿದ್ದಾರೆ’ ಎಂದು ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ.
