ಭಾರತದ ಬಹುಸಂಖ್ಯಾತರನ್ನು ಮೂರ್ಖರನ್ನಾಗಿಸುವ ‘ಮಂದಿರ ರಾಜಕೀಯ’
ರಾಮ ಮಂದಿರದ ಹೆಸರಿನಲ್ಲಿ ‘ಕೋಟಿ ಲೂಟಿ ಮಾಡಿದವರ’ ರಹಸ್ಯ ನಿಮ್ಮನ್ನು ಬೆಚ್ಚಿ ಬೀಳಿಸಬಹುದು
ಬಾಬರೀ ಮಸೀದಿ ಧ್ವಂಸಗೊಳಿಸಿ 25 ವರ್ಷಗಳು ಕಳೆದವು. ಆರೋಪಿಗಳು ನಿರಾಕರಿಸಿದರೂ, ಪ್ರಜ್ಞಾವಂತ ನಾಗರಿಕರ ಪ್ರಕಾರ ಅದೊಂದು ಪೂರ್ವನಿಯೋಜಿತ ಕೃತ್ಯವಾಗಿತ್ತು. ಮಸೀದಿಯನ್ನು ಕೆಡವಿದ ಅರೋಪಿಗಳಲ್ಲಿ ಹಲವರು ಅಧಿಕಾರದ ಸುಖವನ್ನು ಪಡೆದು ರಾಜಕೀಯ ನಿವೃತ್ತಿ ಪಡೆದರೆ, ಇನ್ನು ಕೆಲವರು ಈಗಲೂ ಅಧಿಕಾರವನ್ನು ಆಸ್ವಾದಿಸುತ್ತಿದ್ದಾರೆ. ಇನ್ನು ಕೆಲವರು ಶಿಕ್ಷೆಯನ್ನನುಭವಿಸದೇ ಈ ಲೋಕವನ್ನು ತ್ಯಜಿಸಿದ್ದಾರೆ.
25 ವರ್ಷಗಳು ಕಳೆದರೂ ಬಾಬರೀ ಮಸೀದಿ ಇಂದಿಗೂ ಭಾರತದ ರಾಜಕೀಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಗ್ರಾಮ ಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭೆಯ ಚುನಾವಣೆ ತನಕ ಎಲ್ಲಾ ರಾಲಿಗಳಲ್ಲೂ ಒಂದೇ ಧ್ವನಿ ಕೇಳಿಸುತ್ತಿದೆ “ಮಂದಿರ್ ವಹೀಂ ಬನಾಯೇಂಗೆ”, ಆದರೆ ಸ್ಪಷ್ಟವಾಗಿ ಯಾರೂ ದಿನಾಂಕ ಹೇಳುತ್ತಿಲ್ಲ. ಲೋಕಸಭೆಯಲ್ಲಿ ಬಹುಮತ ದೊರಕಿದಲ್ಲಿ ಮಂದಿರ ನಿರ್ಮಿಸುತ್ತೇವೆಂದು ಅಶ್ವಾಸನೆ ನೀಡಿದ್ದ ಬಿಜೆಪಿ, ಇದೀಗ ರಾಜ್ಯ ಸಭೆಯಲ್ಲಿ ಬಹುಮತದ ಕೊರತೆಯನ್ನೂ, ಕಾಂಗ್ರೆಸ್ ಪಕ್ಷವನ್ನೂ ದೂಷಿಸುತ್ತಿದೆ. ಇತ್ತೀಚೆಗೆ ನಮ್ಮದೇ ರಾಜ್ಯದ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ‘ಧರ್ಮ ಸಂಸದ್’ ನಲ್ಲಿ ಮಂದಿರ ನಿರ್ಮಿಸುತ್ತೇವೆಂದು ಅಬ್ಬರಿಸಿದವರಲ್ಲಿ ಯಾರೂ ದಿನಾಂಕ ತಿಳಿಸಿಲ್ಲ.
ಇನ್ನು, ಬಿಜೆಪಿಯ ವಿವಾದಾತ್ಮಕ ನಾಯಕ ಸುಬ್ರಮಣ್ಯಂ ಸ್ವಾಮಿ, ಬಹುಮತ ದೊರಕಿದಲ್ಲಿ 2017ರಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ, 2014ರಲ್ಲಿ ಟ್ವೀಟ್ ಮಾಡಿದ್ದರು. 2017ರ ಕೊನೆಯ ಕೆಲವೇ ದಿನಗಳು ಮಾತ್ರ ಉಳಿದಿವೆ. ಮಂದಿರ ನಿರ್ಮಾಣದ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.
ಈ ಮಧ್ಯೆ, ಬಾಬರೀ ಮಸೀದಿ – ರಾಮ ಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕಕ್ಷಿದಾರರಾಗಿರುವ ನಿರ್ಮೋಹಿ ಅಕಾರವು, ವಿಶ್ವ ಹಿಂದೂ ಪರಿಷತ್ ರಾಮ ಮಂದಿರದ ಹೆಸರಿನಲ್ಲಿ 1400 ಕೋಟಿ ಲೂಟಿ ಮಾಡಿದೆ ಎಂಬ ಗಂಭೀರ ಅರೋಪವನ್ನೆಸಗಿದೆ.
ಮೋದಿ-ಯೋಗಿ ಜೋಡಿ ರಾಮ ಮಂದಿರ ನಿರ್ಮಿಸುತ್ತಾರೆಂಬ ಕನಸು ಕಾಣುತ್ತಿರುವವರಿಗೆ ನಮ್ಮಲ್ಲೊಂದು ದುಃಖಕರ ರಹಸ್ಯವಿದೆ.
ಕಾರವಾನ್ ಮ್ಯಾಗಝಿನ್ ವರದಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಕೇರಳದ ತ್ರಿಪ್ಪುಣಿತ್ತುರ ಎಂಬಲ್ಲಿ ನಡೆದ ಆರೆಸ್ಸೆಸ್ ನ ಬೈಠಕ್ ನಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ರಲ್ಲಿ ಅಯೋಧ್ಯೆಯ ಬಗ್ಗೆ ಪ್ರಶ್ನಿಸಲಾಗಿತ್ತು.
“ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಅದೆಷ್ಟು ಸಮಯ ತೆಗೆದುಕೊಳ್ಳಬಹುದು?” ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಈ ವಿವಾದವು ಇನ್ನೂ ಮೂವತ್ತು ವರ್ಷಗಳವರೆಗೆ ಪರಿಹಾರವಾಗಲಿಕ್ಕಿಲ್ಲ” ಎಂದು ಉತ್ತರಿಸಿದ್ದರು. ಮುಂದುವರಿಸುತ್ತಾ, ಭಾಗವತ್ “ಅಲ್ಲಿಯವರೆಗೆ ವಿವಾದವನ್ನು ಜೀವಂತವಾಗಿಡುವುದು ವಿಶ್ವ ಹಿಂದೂ ಪರಿಷತ್ ನ ಮುಂದಿರುವ ಅತೀ ದೊಡ್ಡ ಸವಾಲಾಗಿದೆ” ಎಂದು ಹೇಳಿದ್ದರು.
ಅಂದು ಅವರ ಮಾತಿನಲ್ಲಿ ವಿಶ್ವಾಸವಿರಿಸುವುದು ಕಷ್ಟವಾಗಿತ್ತಾದರೂ, ಪ್ರಸಕ್ತ ಸನ್ನಿವೇಶ ಹಾಗೂ ನಾಟಕಗಳನ್ನು ಅಧ್ಯಯನ ನಡೆಸಿದರೆ ಭಾಗ್ವತ್ ಮಾತು ವಿಶ್ವಾಸಾರ್ಹ ಎಂದು ಅನಿಸಿದರೂ ತಪ್ಪೇನಿಲ್ಲ.
ಒಟ್ಟಿನಲ್ಲಿ, ಮಂದಿರ್ ವಹೀಂ ಬನಾಯೇಂಗೆ, ತಾರೀಖ್ ನಹೀ ಬತಾಯೇಂಗೆ!
