ವರದಿಗಾರ (08.12.2017) : ಗುಜರಾತ್ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ಬಿಜೆಪಿಗರ ಆತ್ಮವಿಶ್ವಾಸ ದಿನೇ ದಿನೇ ಕುಂದುತ್ತಿರುವಂತೆ ಭಾಸವಾಗುತ್ತಿದೆ. ಅದಕ್ಕೆ ಅಲ್ಲಿನ ಜನ ಬಿಜೆಪಿ ಪ್ರಚಾರಕ್ಕೆ ಹೋದಲ್ಲೆಲ್ಲಾ ನೀಡುತ್ತಿರುವ ಪ್ರತಿಕ್ರಿಯೆಯೇ ಕಾರಣವಾಗಿದೆ. ಅದಕ್ಕೆ ಪೂರಕವೆಂಬಂತೆ ಗುಜರಾತಿನ ಸೂರತ್ ನಗರ ಹೀರಾ ಬಝಾರ್ ಬಳಿಯದ್ದೆಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪ್ರಚಾರ ರ್ಯಾಲಿಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ಜನರು, ಅವರ ಟೋಪಿ, ಶಾಲು ಮತ್ತು ಬಿಜೆಪಿಯ ಚಿಹ್ನೆಗಳನ್ನು ಕಳಚಿ ಹಾಕುತ್ತಿರುವ ದೃಶ್ಯಗಳಿವೆ. ಬೃಹತ್ ಜನಸ್ತೋಮದ ವಿರೋಧದ ಮುಂದೆ ಬಿಜೆಪಿ ಕಾರ್ಯಕರ್ತರು ಯಾವೊಂದೂ ಚಕಾರವೆತ್ತದೆ ಮುಂದೆ ಸಾಗುತ್ತಿರುವುದು ದೃಶ್ಯಗಳಲ್ಲಿ ಕಂಡು ಬರುತ್ತಿದೆ.
ಒಂದೆಡೆ ಪಟೇಲ್ ಸಮುದಾಯದ ವಿರೋಧ ಕಟ್ಟಿಕೊಂಡಿರುವ ಬಿಜೆಪಿಯನ್ನು ಈಗ ಇಡೀ ರಾಜ್ಯದ ಜನತೆಯೇ ಬೇಡವೆನ್ನುವ ಹಾಗಿದೆ. ಪ್ರಧಾನಿ ಮೋದಿಯ ರ್ಯಾಲಿಗಳಲ್ಲಿ ನಿರೀಕ್ಷೆಯ ಪ್ರಮಾಣದಲ್ಲಿ ಜನ ಸೇರದಿರುವುದು ಬಿಜೆಪಿಯನ್ನು ಇನ್ನಷ್ಟು ಚಿಂತಾಕ್ರಾಂತರನ್ನಾಗಿಸಿದೆ.
ಸೂರತ್ ಘಟನೆಯ ಕುರಿತಂತೆ ದಲಿತ ಚಳವಳಿಯ ನೇತಾರ ಮತ್ತು ವಡ್ಗಾಂ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿಗ್ನೇಶ್ ಮೇವಾನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋ ಹಾಕಿದ್ದು, ‘ಗುಜರಾತಿನ ಜನತೆ ಬಿಜೆಪಿಯಿಂದ ಅದೆಷ್ಟರ ಮಟ್ಟಿಗೆ ಅಸಂತುಷ್ಟರಾಗಿದ್ದಾರೆಂದು ಈ ವೀಡಿಯೋ ಒಂದು ಸಾಕ್ಷಿಯಾಗಿದೆ. ಜನರು ಅವರ ಬಿಜೆಪಿಯ ಟೋಪಿ ಮತ್ತು ಶಾಲು ಕಳಚಿಡುತ್ತಿದ್ದಾರೆ. ಒಂದು ವೇಳೆ ಬಿಜೆಪಿ ರಾಜ್ಯದಲ್ಲಿ ಅಭಿವೃದ್ಧಿ ಮಾಡಿದೆಯೆಂದಾದರೆ ಜನತೆ ಅವರಿಗೆ ಈ ರೀತಿಯ ಸ್ವಾಗತ ನೀಡುತ್ತಿರಲಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
दोस्तों गुजरात का ये वीडियो जरूर देखिये, जनता बीजेपी से इतनी परेशान हो गयी है कि बीजेपी को वोट देना तो साइड में रह जाएगा, जनता बीजेपी कार्यकर्ता के टोपी और स्कार्फ तक निकाल देते है, अगर बीजेपी ने विकास ही किया होता तो उनके कार्यकर्ता का ऐसा स्वागत ना होता। pic.twitter.com/789ptA1O7Y
— Jignesh Mevani (@jigneshmevani80) December 8, 2017
ಒಟ್ಟಿನಲ್ಲಿ ಕಳೆದ 22 ವರ್ಷಗಳ ಕಾಲ ದೇಶಕ್ಕೆ ‘ಗುಜರಾತ್ ಮಾದರಿ ರಾಜ್ಯ’ ಎಂದು ದೇಶದಾದ್ಯಂತ ಹೇಳಿಕೊಂಡಿದ್ದ ಪ್ರಧಾನಿ ಮೋದಿಯವರಿಗೆ, ಅದೇ ರಾಜ್ಯದ ಚುನಾವಣಾ ಪ್ರಚಾರದಲ್ಲಿ ರಾಜ್ಯಕ್ಕೆ ಮಾಡಿರುವ ಅಭಿವೃದ್ಧಿಯ ಕುರಿತು ಹೇಳಲು ವಿಷಯಗಳಿಲ್ಲದಂತಾಗಿರುವುದು ವಿಪರ್ಯಾಸವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸುತ್ತಾರೆ
