ವರದಿಗಾರ (07.12.2017) : ರಾಜಸ್ಥಾನದಲ್ಲಿ ನಡೆದ ಭೀಭತ್ಸಕ ಕೃತ್ಯವೊಂದರಲ್ಲಿ ‘ಲವ್ ಜಿಹಾದ್’ ಆರೋಪ ಹೊರಿಸಿ ಮುಸ್ಲಿಂ ಯುವಕನೋರ್ವನನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ನಡೆದಿದೆ. ತದ ನಂತರ ಹಂತಕ ಅದನ್ನು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕಿ ವಿಕೃತ ಸಂತೋಷ ಮೆರೆದಿದ್ದಾನೆ.
ರಾಜಸ್ಥಾನದ ರಾಜ್ ಸಮಂದ್ ಪ್ರದೇಶದ ರಾಜ್ ನಗರ ಎಂಬಲ್ಲಿ ಈ ಘಟನೆ ವರದಿಯಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೊಲೀಸರಿಗೆ ಅರ್ದಂಬರ್ಧ ಬೆಂದ ಮೃತದೇಹವೊಂದರ ಬಗ್ಗೆ ಮಾಹಿತಿ ಲಭಿಸಿ ಘಟನಾ ಸ್ಥಳಕ್ಕೆ ಹೋಗಿ ವಿಚಾರಿಸಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಮೊಹಮ್ಮದ್ ಭಟ್ಟ ಶೇಕ್ ಎಂದು ಗುರುತಿಸಲಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೃಷಿ ಕಳೆ ಕೀಳುವಂತಹಾ ಆಯುಧವನ್ನು ಬಳಸಿಕೊಂಡು ಹತ್ಯೆ ನಡೆಸಿ, ನಂತರ ಮೃತದೇಹದ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಹತ್ಯೆ ನಡೆಸುವಂತಹಾ ಮತ್ತು ಬೆಂಕಿ ಹಚ್ಚುವ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿರುವ ಹಂತಕನನ್ನು ಶಂಭುನಾಥ್ ರಾಯಿಗರ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಹಂತಕ ಶಂಭುನಾಥ್, ಮೊಹಮ್ಮದ್ ಭಟ್ಟ ಶೇಕ್ ಗೆ ಆಯುಧದಿಂದ ದಾಳಿ ಮಾಡುವ ದೃಶ್ಯಗಳಿವೆ. ‘ಲವ್ ಜಿಹಾದ್’ ಗೆ ಇದೇ ಶಿಕ್ಷೆ ಎಂದು ಹಂತಕ ಶಂಭುನಾಥ್ ವೀಡಿಯೋದಲ್ಲಿ ಹೇಳುತ್ತಿರುವುದು ಕಂಡುಬಂದಿದೆ. ಪೊಲೀಸರು ಆರೋಪಿಯನ್ನು ಇನ್ನೂ ಬಂಧಿಸಿಲ್ಲ, ಘಟನೆಯ ಕುರಿತು ತನಿಖೆ ಮುಂದುವರೆದಿದೆ.
