ವರದಿಗಾರ (07.12.2017): ರಾಜ್ಯಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅಥವಾ ಇತರ ಯಾರೇ ಬರಲಿ ಆದರೆ, ಬಂದವರು ಇಲ್ಲಿನ ಸಾಮರಸ್ಯವನ್ನು ಕದಡಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಟ್ಕಳದಲ್ಲಿ ಹೇಳಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ರಾಜಕೀಯ ಕಾರ್ಯದರ್ಶಿಗಳ ನೇಮಕ ಸಂಬಂಧ ಟೀಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ‘ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ 12 ಮಂದಿಯನ್ನು ನೇಮಿಸಿಕೊಳ್ಳಲಾಗಿದೆ. ಇದಕ್ಕೆ ಕಾನೂನಿನಲ್ಲೂ ಅವಕಾಶ ಇದೆ. ದೆಹಲಿಯಂಥ ಕೇಂದ್ರಾಡಳಿತ ಪ್ರದೇಶಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕಾರ್ಯದರ್ಶಿಗಳಿದ್ದಾರೆ.
ತಮ್ಮ ಅವಧಿಯಲ್ಲಿ ನೇಮಕ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ದೇವೇಗೌಡರು ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮುಜರಾಯಿ ಇಲಾಖೆಯ ದೇವಾಲಯಗಳಿಗೆ ದಲಿತ ಅರ್ಚಕರ ನೇಮಕ ಆಗಬಾರದು ಎಂದೇನಿಲ್ಲ. ನಾರಾಯಣ ಗುರು ಹೇಳಿದ ಹಾದಿಯಲ್ಲಿ ನಾವು ಹೆಜ್ಜೆ ಹಾಕುವೆವು. ಯಾರು ಬೇಕಾದರೂ ದೇವಸ್ಥಾನ ನಿರ್ಮಿಸಿಕೊಂಡು ಅವರೇ ಅರ್ಚಕರಾಗಬಹುದು. ಆದರೆ ದಲಿತ ಅರ್ಚಕರ ನೇಮಕ ಸಂಬಂಧ ವಿಶೇಷ ಕಾನೂನು ರಚಿಸುವ ಪ್ರಸ್ತಾವ ಸರಕಾದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
